ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ: ಆಕಾಂಕ್ಷಿಗಳು ತೆರೆಮರೆಯಲ್ಲಿ ಸಿಎಂ ಹುದ್ದೆಗೇರಲು ತಯಾರಿ!

ಬೆಂಗಳೂರು,ಜು.23- ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆಂಬ ವದಂತಿಯ ನಡುವೆ ಸಿಎಂ ಸ್ಥಾನದ ಆಕಾಂಕ್ಷಿಗಳು ತೆರೆಮರೆಯಲ್ಲಿ ಸಿಎಂ ಹುದ್ದೆಗೇರಲು ತಯಾರಿ ನಡೆಸಿದ್ದಾರೆ. ಕಾಶಿಯಾತ್ರೆಗೆ ತೆರಳಿದ್ದ ಶಾಸಕ ಅರವಿಂದ ಬೆಲ್ಲದ್ ಇದೀಗ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಎರಡು ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದ್ದ ಸಿಎಂ ಸ್ಥಾನದ ಆಕಾಂಕ್ಷಿ ಶಾಸಕ ಅರವಿಂದ ಬೆಲ್ಲದ್ ಕಾಶಿ ವಿಶ್ವನಾಥನ ದರ್ಶನ ಮಾಡಿ ಜಂಗಮವಾಡಿ ಮಠದಲ್ಲಿರುವ ಪಂಚಪೀಠಗಳಲ್ಲಿ ಒಂದಾದ ಕಾಶಿಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು. ನಂತರ ಬೆಂಗಳೂರಿಗೆ ಮರಳದೇ ನವದೆಹಲಿಗೆ ತೆರಳಿ ಅಚ್ಚರಿ ಮೂಡಿಸಿದ್ದಾರೆ.

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಶಾಸಕ ಬೆಲ್ಲದ್, ಈಗ ಬಿ.ಎಲ್ ಸಂತೋಷ್ ಸೇರಿದಂತೆ ಹೈಕಮಾಂಡ್ ನಾಯಕರು ಮತ್ತು ಆರ್‍ಎಸ್‍ಎಸ್ ನಾಯಕರ ಭೇಟಿಗೆ ಯತ್ನಿಸುತ್ತಿದ್ದಾರೆ. ಸಿಎಂ ಸ್ಥಾನದ ರೇಸ್ ನಲ್ಲಿರುವವರ ಪಟ್ಟಿಯಲ್ಲಿ ಬೆಲ್ಲದ್ ಹೆಸರೂ ಕೂಡ ಇರುವುದರಿಂದ ಬೆಲ್ಲದ್ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.

ಈಗಾಗಲೇ ಸಚಿವ ಮುರುಗೇಶ್ ನಿರಾಣಿ ವಾರಣಾಸಿಗೆ ಭೇಟಿ ನೀಡಿ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದರು, ಆ ವೇಳೆ, ಉತ್ತರ ಪ್ರದೇಶದಲ್ಲಿ ಪ್ರಭಾವಿ ನಾಯಕರು ಮತ್ತು ಆರ್‍ಎಸ್‍ಎಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಅಲ್ಲದೇ ನಿರಾಣಿ ಪುತ್ರನಿಗೆ ಹೈಕಮಾಂಡ್ ನಾಯಕರ ಜೊತೆ ನೇರ ಸಂಪರ್ಕವಿದ್ದು, ಆ ಮೂಲಕವೂ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅದರ ಜೊತೆ ಸಚಿವ ಜಗದೀಶ್ ಶೆಟ್ಟರ್ ಕೂಡ ಗುಜರಾತ್ನಿಂದ ದೆಹಲಿಗೆ ತೆರಳಿ ವರಿಷ್ಠರ ಭೇಟಿ ಮಾಡಿ ವಾಪಸ್ ಆಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ