ಮಂಡ್ಯ : ಕೆಆರ್ಎಸ್ ಅಣೆಕಟ್ಟು ಮೇಲ್ಭಾಗದಿಂದ ಬೃಂದಾವನವನ್ನು ಸಂಪರ್ಕಿಸುವ ಮೆಟ್ಟಿಲು ರಸ್ತೆಯ ಗೋಡೆ ಕುಸಿದಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಗೋಡೆಗೆ ಕಲ್ಲುಗಳನ್ನು ಜೋಡಿಸುವ ವೇಳೆ ಒಳಭಾಗಕ್ಕೆ ಮಣ್ಣನ್ನು ತುಂಬಿ ಮೇಲ್ಭಾಗದಲ್ಲಿ ಮಾತ್ರ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆ. ಇದರ ಪರಿಣಾಮ ಮಳೆಯಿಂದ ಮಣ್ಣು ಕುಸಿತಗೊಂಡು ಕಲ್ಲುಗಳು ಜಾರಿಬಿದ್ದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ, ವಾಸ್ತವ ಸತ್ಯ ಇನ್ನೂ ನಿಗೂಢವಾಗಿಯೇ ಇದೆ.
ಕೆಆರ್ಎಸ್ ಅಣೆಕಟ್ಟೆಯಿಂದ ಎಷ್ಟು ನೀರು ಹರಿದುಹೋಗಿದೆಯೋ ಅದರ ನಿರ್ವಹಣೆಗೂ ಅಷ್ಟೇ ಪ್ರಮಾಣದಲ್ಲಿ ಹಣ ಹರಿದುಬಂದಿದೆ. ಆದರೆ, ಈ ಹಣ ಅಣೆಕಟ್ಟೆ ಸುಭದ್ರತೆ ಕಾಪಾಡುವುದಕ್ಕೆ ಎಷ್ಟರಮಟ್ಟಿಗೆ ಬಳಕೆಯಾಗಿದೆ ಎಂಬ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ದುರಸ್ತಿ ನೆಪದಲ್ಲಿ ಕೋಟ್ಯಂತರ ರು. ಹಣ ಯಾರ್ಯಾರ ಜೇಬಿಗೆ ಸೇರಿದೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ಕೆಆರ್ಎಸ್ ಅಣೆಕಟ್ಟೆಯ ಗೋಡೆ ಕುಸಿದಿರುವುದಕ್ಕೂ ಅಣೆಕಟ್ಟೆಗೂ ಸಂಬಂಧವಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅವರ ಮಾತನ್ನು ನಂಬುವ ಸ್ಥಿತಿಯಲ್ಲಿ ಜನರಿಲ್ಲ. ಕೆಆರ್ಎಸ್ ಅಣೆಕಟ್ಟು ದುರಸ್ತಿ ಕಾಮಗಾರಿ ತನಿಖೆ ಜೊತೆಗೆ, ಸುರಕ್ಷತೆಯ ಪರಿಶೀಲನೆಯೂ ನಡೆಯಬೇಕೆಂದು ಒತ್ತಾಯಿಸಿದ್ದಾರೆ.
ಮೆಟ್ಟಿಲು ರಸ್ತೆಯ ಗೋಡೆ ಕಾಮಗಾರಿಯನ್ನು ಕಳಪೆಯಿಂದ ನಡೆಸಿರುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಗೋಡೆ ಯಾವ ಕಾರಣಕ್ಕೆ ಕುಸಿದಿದೆ ಎಂಬ ಬಗ್ಗೆಯೂ ಸ್ಪಷ್ಟವಾಗಿ ಹೇಳದೆ ಎಲ್ಲವನ್ನೂ ಮರೆಮಾಚಲಾಗುತ್ತಿದೆ. ಅಕಾರಿಗಳ ನಡೆ ಸಂಶಯಾಸ್ಪದವಾಗಿರುವುದರಿಂದ ಅಣೆಕಟ್ಟೆಯ ಸುಭದ್ರತೆಯ ಬಗ್ಗೆ ನೀಡಿರುವ ಹೇಳಿಕೆಯಲ್ಲೂ ಸತ್ಯಾಂಶವಿದೆ ಎನ್ನುವುದನ್ನು ನಂಬುವುದು ಕಷ್ಟವಾಗಿದೆ.
ಕೆಆರ್ಎಸ್ ಅಣೆಕಟ್ಟು ಮೇಲ್ನೋಟಕ್ಕೆ ಭದ್ರವಾಗಿರುವುದಾಗಿ ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅಣೆಕಟ್ಟು ಸುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟು ಸುರಕ್ಷಿತವಾಗಿರಲಿದೆ ಎಂಬ ಬಗ್ಗೆ ತುಟಿಬಿಚ್ಚುತ್ತಿಲ್ಲ. ಆ ಬಗ್ಗೆ ಭರವಸೆಯನ್ನೂ ನೀಡುತ್ತಿಲ್ಲ. ಅಧಿಕಾರಿಗಳ ಈ ದ್ವಂದ್ವ ನಿಲುವು ಗೊಂದಲ ಮತ್ತು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ನಿಲ್ಲದ ಗಣಿಗಾರಿಕೆ :
ಬೇಬಿ ಬೆಟ್ಟದಲ್ಲಿ ಸಂಪೂರ್ಣ ಗಣಿಗಾರಿಕೆಯನ್ನು ನಿಷೇಸಲಾಗಿದ್ದರೂ ಸದ್ದಿಲ್ಲದೆ ಅಲ್ಲಿ ಗಣಿಗಾರಿಕೆ ಆರಂಭವಾಗಿದೆ ಎಂದು ಸುತ್ತಮುತ್ತಲಿನ ಜನರು ಅರೋಪಿಸಿದ್ದಾರೆ.
ಕೆಆರ್ಎಸ್ ಅಣೆಕಟ್ಟು ಬಳಿ ಮೆಟ್ಟಿಲು ರಸ್ತೆಯ ಗೋಡೆ ಕುಸಿತಕ್ಕೆ ಬನ್ನಂಗಾಡಿ ವ್ಯಾಪ್ತಿಯ ಗಣಿ ಪ್ರದೇಶದಲ್ಲಿ ನಡೆದ ಸ್ಪೋಟ ಕಾರಣವೆಂದು ಸ್ಥಳೀಯರು ಹೇಳುತ್ತಿದ್ದಾರೆ. ಭಾನುವಾರ ರಾತ್ರಿ ಮೆಗ್ಗರ್ ಬ್ಲಾಸ್ಟ್ ನಡೆಸಿರುವುದಾಗಿ ತಿಳಿದುಬಂದಿದ್ದು ಬೇಬಿ ಬೆಟ್ಟದ ಕಲ್ಲುಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಸಲು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಸಿದ್ದರೂ ಗಣಿ ಸಾಮಗ್ರಿಗಳನ್ನು ತುಂಬಿಕೊಂಡು ಲಾರಿಗಳು ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ. ಇದು ಜಿಲ್ಲಾಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಆರ್ಎಸ್ ಅಣೆಕಟ್ಟು ಬಳಿ ಗೋಡೆ ಕುಸಿತ ಪ್ರಕರಣದ ಸಮಗ್ರ ತನಿಖೆ ಆಗಬೇಕು. ಕರ್ತವ್ಯಲೋಪವೆಸಗಿರುವ ಅಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ರೈತ ಸಮುದಾಯದವರೂ ಆಗ್ರಹಿಸಿದ್ದಾರೆ.