![vegetables-truck](http://kannada.vartamitra.com/wp-content/uploads/2019/06/vegetables-truck-678x381.jpg)
ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಜೋಳ, ತೊಗರಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಪಡಿತರವಾಗಿ ನೀಡಲು ನಿರ್ಧರಿಸಲಾಗಿದೆ. ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜೋಳ, ತೊಗರಿ, ರಾಗಿ ನೀಡಬೇಕು ಎಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಅದನ್ನು ಈಗ ಈಡೇರಿಸಲಾಗುತ್ತಿದೆ ಎಂದರು.
ಕೃಷಿ ಕಾಯ್ದೆ ವಾಪಸ್ ಇಲ್ಲ:
ಸಂಸತ್ತಿನ 545 ಸಂಸದರು ಸೇರಿ ಅನುಮೋದಿಸಿದ ಮೂರು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. 70 ವರ್ಷ ಒಂದು ಕಾಯ್ದೆಯನ್ನು ಸಹಿಸಿಕೊಂಡಿದ್ದಾರೆ. ಹೊಸ ಕಾಯ್ದೆಯನ್ನು ಎರಡು ವರ್ಷಗಳಿಗಾದರೂ ಸಹಿಸಿಕೊಳ್ಳಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಖಾತೆ ಹಂಚಿಕೆ ಅಸಮಾಧಾನವಿಲ್ಲ:
ನನಗೆ ಆಹಾರ ಖಾತೆ ನೀಡಿರುವ ಬಗ್ಗೆ ಸಂಪೂರ್ಣ ತೃಪ್ತಿ ಇದೆ. ಆಹಾರ ಖಾತೆ ಬದಲಿಸಿ ಅಂಕಿ, ಸಂಖ್ಯೆ, ವಯಸ್ಕರ ಶಿಕ್ಷಣ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ . ಕವಿಡ್ನಿಂದಾಗಿ ನೀರಾವರಿ ಯೋಜನೆ ಚಾಲನೆ ಪಡೆದಿಲ್ಲ ಎಂದರು.
ಅನ್ಯಾಯವಾಗಲು ಬಿಡಲ್ಲ:
ಉತ್ತರ ಕರ್ನಾಟಕಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಬೇಡಿ ಇಟ್ಟಿದ್ದೆ. ಆದರೆ ಅದರ ಹಿಂದಿನ ಕಾಳಜಿ ಈ ಭಾಗ ಅಭಿವೃದ್ಧಿ ಆಗಬೇಕು ಎಂಬುದು. ಅಖಂಡ ಕರ್ನಾಟಕದಲ್ಲಿ ನನಗೆ ನಂಬಿಕೆ ಇದೆ ಎಂದರು.