ಹೊಸದಿಲ್ಲಿ: ನೂತನ ಮೂರು ಕೃಷಿ ಕಾಯ್ದೆಗಳ ಕುರಿತು ರೈತ ಸಂಘಟನೆಗಳ ಹಾಗೂ ಕೇಂದ್ರ ಸರ್ಕಾರದ ನಡುವೆ 8 ಸುತ್ತಿನ ಮಾತುಕತೆ ನಡೆದಿದ್ದರೂ ರೈತ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆ ಬೇಸರ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಕಾಯ್ದೆಗಳಿಗೆ ತಾತ್ಕಾಲಿಕವಾಗಿ ತಡೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ.
ಜತೆಗೆ ಮೂರು ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಾಗೂ ಕಳೆದ ಒಂದು ತಿಂಗಳಿಂದ ದಿಲ್ಲಿ ಗಡಿಯಲ್ಲಿ ರಸ್ತೆ ತಡೆಯೊಡ್ಡಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸ್ಥಳದಿಂದ ತೆರವುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಮಂಗಳವಾರ ಅಥವಾ ಗುರುವಾರ ತೀರ್ಪು ಪ್ರಕಟಿಸುವುದಾಗಿ ಮುಖ್ಯನ್ಯಾಯಮೂರ್ತಿಎಸ್.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ಇದೇ ವೇಳೆ ರೈತರ ಸಮಸ್ಯೆ ಬಗೆಹರಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಸುಪ್ರೀಂ ರಚಿಸುವ ತನಕ ಹಾಗೂ ಸಮಿತಿಯು ಕಾಯ್ದೆಗಳ ಬಗ್ಗೆ ಅಂತಿಮ ವರದಿ ಸಲ್ಲಿಸುವ ತನಕ ಕಾಯ್ದೆಗಳನ್ನು ಜಾರಿಗೊಳಿಸುವುದರಿಂದ ತಾತ್ಕಾಲಿಕವಾಗಿ ತಡೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ.
ಇನ್ನು,ಪಂಜಾಬ್ – ಹರ್ಯಾಣ ಹೊರತುಪಡಿಸಿ ದೇಶದ ಉಳಿದೆಡೆ ಬಹುತೇಕ ರೈತ ಸಂಘಟನೆಗಳು ಕಾಯ್ದೆಗೆ ಬೆಂಬಲ ಸೂಚಿಸಿವೆ ಎಂದು ಸರ್ಕಾರದ ಪರ ವಕಾಲತ್ತು ವಹಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು. ಕಾಯ್ದೆಗೆ ಬೆಂಬಲ ಸೂಚಿಸುವ ರೈತರು ಸಮಿತಿಗೆ ತಿಳಿಸಲಿ ಎಂದು ಕೋರ್ಟ್ ಹೇಳಿದೆ.