ಹೊಸದಿಲ್ಲಿ: ಹೊಸ ಕೃಷಿ ಕಾಯ್ದೆಗಳಲ್ಲಿ ಯಾವುದೇ ಖಾಸಗಿ ಸಂಸ್ಥೆ ರೈತರ ಭೂಮಿಯನ್ನು ಕಬಳಿಸಲು ಎಂದಿಗೂ ಸಾಧ್ಯವಾಗದು ಎಂದು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಕುರಿತಂತೆ ರೈತರಲ್ಲಿದ್ದ ಆತಂಕವನ್ನು ನಿವಾರಿಸಿದ್ದಾರೆ.
ಇದೇ ವೇಳೆ, ಹೊಸ ಕಾಯ್ದೆಗಳಲ್ಲಿ ನಾವು ಖಾಸಗಿ ಸಂಸ್ಥೆಗಳೊಂದಿಗೆ ಕೃಷಿ ಉತ್ಪನ್ನಗಳಿಗಾಗಿ ಒಪ್ಪಂದ ಮಾಡಿಕೊಳ್ಳುತ್ತೇವೆ ಹೊರತು ಭೂಮಿಗಾಗಿಯಲ್ಲ ಎಂದು ಪ್ರಧಾನಿ ಸ್ಪಷ್ಟ ಪಡಿಸಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ವಿಡಿಯೋ ಕಾನರೆನ್ಸ್ ಮೂಲಕ
ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಹರ್ಯಾಣದ ರೈತರೊಂದಿಗೆ ಮೋದಿ ಸಂವಾದ ನಡೆಸಿದರು. ಅಲ್ಲದೆ, ರೈತರಿಂದ ಹೊಸ ಕೃಷಿ ಕಾಯ್ದೆಗಳ ಪ್ರಯೋಜನ ಹಾಗೂ ಯಶಸ್ಸಿನ ಬಗ್ಗೆ ಪ್ರಧಾನಿ ಆಲಿಸಿದರು. ಜತೆಗೆ, ಈ ವೇಳೆ ಕೃಷಿ ಒಪ್ಪಂದದಲ್ಲಿ ಖಾಸಗಿ ಸಂಸ್ಥೆಗಳೊಂದಿಗಿನ ಒಪ್ಪಂದದಿಂದಾಗಿರುವ ಲಾಭದ ಅನುಭವವನ್ನೂ ಕೃಷಿಕರು ಹಂಚಿಕೊಂಡರು.
ರೈತರಿಗೆ ವಿಶ್ವಾಸವಿದೆ
ಅರುಣಾಚಲ ಪ್ರದೇಶದಲ್ಲಿದ್ದುಕೊಂಡೇ ನೀವು ನಿಮ್ಮ ಭೂಮಿ ಸುರಕ್ಷಿತವಾಗಿರುವ ಬಗ್ಗೆ ವಿಶ್ವಾಸದಿಂದ ಇದ್ದೀರಿ. ಆದರೆ, ಕೆಲ ಮಂದಿ ಕೃಷಿ ಒಪ್ಪಂದ ಮಾಡಿಕೊಂಡಲ್ಲಿ ಭೂಮಿ ಕಳೆದುಕೊಳ್ಳುವಿರೆಂಬ ವದಂತಿ ಹಬ್ಬಿಸುತ್ತಿದ್ದಾರೆ. ಕಾಯ್ದೆಗಳ ಕುರಿತು ಹಲವು ಅಪಪ್ರಚಾರಗಳು ಹಬ್ಬುತ್ತಿದ್ದು, ಇಂತಹ ಸಮಯದಲ್ಲಿ ನಿಮ್ಮ ಅನುಭವ ಹಂಚಿಕೊಂಡಿರುವುದು ಸಂತಸ ತಂದಿದೆ ಎಂದು ರೈತ ಗಗನ್ ಪರಿನ್ ಅವರೊಂದಿಗಿನ ಸಂವಾದ ವೇಳೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾರ್ಥಕ್ಕಾಗಿ ಕೃಷಿ ಕಾಯ್ದೆಗಳ ವಿರೋಧ
ಕೆಲ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಹೊಸ ಕೃಷಿ ಕಾಯ್ದೆಗಳು ರೈತರ ಹಿತಾಸಕ್ತಿಗೆ ಮಾರಕವಾಗಿವೆ ಎಂಬ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಪ್ರಸಕ್ತ ಕೃಷಿ ಕಾಯ್ದೆಗಳನ್ನು ವಿರೋಸಿ ವಿಪಕ್ಷಗಳ ಪರೋಕ್ಷ ಬೆಂಬಲದೊಂದಿಗೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾರ್ಥ ರಾಜಕಾರಣ ಮಾಡುತ್ತಿರುವವರನ್ನು ಜನತೆ ಹತ್ತಿರದಿಂದ ಗಮನಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರೈತರ ಲಾಭದ ಕುರಿತು ಮಾತನಾಡದ ಪಕ್ಷಗಳು ರೈತರ ಹೆಸರಿನಲ್ಲಿ ದಿಲ್ಲಿಯ ಜನತೆಗೆ ತೊಂದರೆ ಕೊಡುವಲ್ಲಿ ನಿರತರಾಗಿದ್ದು, ದೇಶದ ಆರ್ಥಿಕತೆಯನ್ನು ಹಾಳುಗೆಡವುತ್ತಿದ್ದಾರೆ ಎಂದು ಪ್ರಧಾನಿ ಪರೋಕ್ಷವಾಗಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದರು.
ಖಾಸಗಿ ಸಂಸ್ಥೆಗೂ ಮಾರಲು ಅವಕಾಶ
ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಕಾನೂನುಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಹಿಂದೆ ಕೇವಲ ಮಂಡಿಯಲ್ಲಿ ಮಾತ್ರ ಮಾರಾಟ ಮಾಡಬೇಗಿತ್ತು. ಆದರೆ ಈಗ ನಾವು ಖಾಸಗಿಯವರಿಗೂ ಮಾರಲು ಅವಕಾಶವಿದೆ ಎಂದು ಹೊಸ ಕೃಷಿ ಕಾಯ್ದೆಗಳ ಪ್ರಯೋಜನ ಪಡೆದಿರುವ ಮಧ್ಯ ಪ್ರದೇಶದ ಮನೋಜ್ ಪಟೇಕರ್ ತಮ್ಮ ಅನುಭವ ಹಂಚಿಕೊಂಡರು.