ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರ ಶುಕ್ರವಾರ ಅಂತ್ಯಗೊಂಡಿದ್ದು,ಅಭ್ಯರ್ಥಿಗಳು ಮನೆ ಮನ ಪ್ರಚಾರದತ್ತ ಚಿತ್ತ ಹರಿಸಿದ್ದಾರೆ. ಕೊನೆ ಕ್ಷಣದಲ್ಲಿ ಮತದಾರರ ಮನಗೆಲ್ಲಲು ಆಮಿಷ ಒಡ್ಡುವ ಪ್ರಕರಣಗಳು ನಡೆದಿದ್ದು, ಆರೋಪ-ಪ್ರತ್ಯಾರೋಪಕ್ಕೆ ಅವಕಾಶ ಮಾಡಿಕೊಟ್ಟಿದೆ.
ರಾಜ್ಯದ 109 ತಾಲೂಕುಗಳ 2,709 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ 2ನೇ ಹಂತದ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ಇತ್ತ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ನಡೆದಿದ್ದು, ಗೆಲುವಿಗಾಗಿ ತಂತ್ರಗಾರಿಕೆ ರೂಪಿಸುವಲ್ಲಿ ನಿರತರಾಗಿದ್ದಾರೆ. ಹಲವೆಡೆ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಬೆಂಬಲಿಗ ಅಭ್ಯರ್ಥಿಗಳ ಗೆಲುವಿಗೆ ವಿಶೇಷ ತಂತ್ರಗಾರಿಕೆ ರೂಪಿಸುವಲ್ಲಿ ನಿರತರಾಗಿದ್ದಾರೆ.
ಸಿನಿಮಿಯ ರೀತಿಯಲ್ಲಿ ಆಮಿಷ:
ಈ ಬಾರಿಯ ಪಂಚಾಯಿತಿ ಚುನಾವಣೆಯನ್ನು ಅಭ್ಯರ್ಥಿಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸಿನಿಮಿಯ ರೀತಿಯಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಮಹಿಳೆಯರಿಗೆ ಸೀರೆ, ಮೂಗುತಿ, ಹಣ ನೀಡಿದರೆ, ಪುರುಷರಿಗೆ ಮದ್ಯ, ಹಣ ನೀಡುತ್ತಿದ್ದಾರೆ. ಆಯೋಗವು ಆಮಿಷ ತಡೆಗೆ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಸೆಕ್ಟೋರಲ್ ಅಕಾರಿಗಳನ್ನು ನಿಯೋಜಿಸಿದ್ದರೂ, ಕದ್ದುಮುಚ್ಚಿ ಹಂಚಿಕೆ ಕಾರ್ಯ ಸಾಂಗವಾಗಿ ನಡೆದಿದೆ ಎಂಬ ಆಕ್ಷೇಪವೂ ಕೇಳಿಬಂದಿದೆ.
ಇದರ ಹೊರತಾಗಿಯೂ ಚುನಾವಣೆ ನಡೆಯಲಿರುವ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಕೈಗೊಳ್ಳುವಂತೆ ಆಯೋಗವು ಗೃಹ ಇಲಾಖೆಗೆ ಸೂಚಿಸಿದೆ. ಇದರನ್ವಯ ಐಜಿಪಿಯವರು ಆಯಾ ಜಿಲ್ಲಾ ಎಸ್ಪಿಗಳಿಗೆ ಸೂಚನೆ ನೀಡಿ ಭದ್ರತೆಗೆ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಶನಿವಾರದಿಂದಲೇ ಮದ್ಯದಂಗಡಿಗಳನ್ನು ಮುಚ್ಚಿಸುವಂತೆ ಆಯಾ ಜಿಲ್ಲಾಡಳಿತವು ಚುನಾವಣೆ ಉಸ್ತುವಾರಿ ಹೊತ್ತಿರುವ ಅಕಾರಿಗಳಿಗೆ ಆದೇಶಿಸಿದೆ.