ಬೆಂಗಳೂರು:ಐರೋಪ್ಯ ರಾಷ್ಟ್ರಗಳಿಂದ ರೂಪಾಂತರಿತ ಕೊರೋನಾ ಅಪ್ಪಳಿಸುವ ಅಪಾಯ ಇರುವ ಹಿನ್ನೆಲೆಯಲ್ಲಿ ಡಿ.24ರಿಂದ ಜ.2ರವರೆಗೆ ಪ್ರತಿ ದಿನ ರಾತ್ರಿ 11 ರಿಂದ ಮುಂಜಾನೆ 5 ಗಂಟೆವರೆಗೆ ಕಫ್ರ್ಯೂ ಜಾರಿಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬುಧವಾರ ನಡೆದ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ಸ್ಪಷ್ಟ ನಿರ್ಣಯ ಕೈಗೊಂಡಿದ್ದು, ಮಂಗಳವಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಕಫ್ರ್ಯೂ ವಿಸಲು ಮುಂದಾಗಿತ್ತು. ಆದರೆ, ಏಕಾಏಕಿ ಕಫ್ರ್ಯೂ ಹೇರಿದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡು ಡಿ.24ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಕೊರೋನಾ 2ನೇ ಅಲೆ ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿತ್ತು. ಐರೋಪ್ಯ ರಾಷ್ಟ್ರಗಳಲ್ಲಿ ವಿಭಿನ್ನ ಪ್ರಭೇದದ ಕೊರೋನಾ ಕಾಣಿಸಿಕೊಂಡಿದ್ದು, ನ.25ರಿಂದ ಈವರೆಗೆ ಬ್ರಿಟನ್ ಸೇರಿದಂತೆ ಹಲವು ದೇಶಗಳಿಂದ ಭಾರತ ಅದರಲ್ಲೂ ಕರ್ನಾಟಕಕ್ಕೂ ಪ್ರಯಾಣಿಕರು ಆಗಮಿಸಿರುವ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ಕಫ್ರ್ಯೂ ಅನಿವಾರ್ಯ ಎಂದು ಸರ್ಕಾರ ಪ್ರತಿಪಾದಿಸಿದೆ.
ಯುನೈಟೆಡ್ ಕಿಂಗ್ಡಮ್ನಲ್ಲಿ ರೂಪಾಂತರಗೊಂಡಿರುವ ಕೊರೋನಾ ವೈರಾಣು ಪ್ರಭೇದವು ವ್ಯಾಪಕವಾಗಿ ಹರಡುವುದಾಗಿದ್ದು, ಮೇಲ್ನೋಟಕ್ಕೆ ಮಾರಣಾಂತಿಕವಲ್ಲ ಎನಿಸಿದೆ. ಆದರೂ ಸೋಂಕು ಹರಡುವ ವೇಗ ಹೆಚ್ಚಿದ್ದು, ಅನೇಕರು ಯುಕೆಯಿಂದ ತವರಿನತ್ತ ಹೆಜ್ಜೆ ಹಾಕುತ್ತಿರುವುದರಿಂದ ಎಚ್ಚರಿಕೆ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ವಿನಾಕಾರಣ ಹೊರ ಬರಬೇಡಿ
ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುವ ನೌಕರರನ್ನು ಹೊರತುಪಡಿಸಿ ಉಳಿದವರ್ಯಾರೂ ರಾತ್ರಿ ವೇಳೆ ಸಂಚರಿಸಲು ಅವಕಾಶ ಇಲ್ಲ. ಅನಿವಾರ್ಯ ಕಾರಣದಿಂದ ದೂರದ ಊರುಗಳಿಗೆ ತೆರಳಲು ಸಮಸ್ಯೆಗಳಿಲ್ಲ. ಆದರೆ, ಸಂಜೆ ವೇಳೆಗೆ ಕರ್ತವ್ಯ ಮುಗಿಸಿ ಮನೆ ಸೇರಿಕೊಳ್ಳುವವರು ಅನಗತ್ಯವಾಗಿ ರಾತ್ರಿ ವೇಳೆ ಸಂಚರಿಸುವಂತಿಲ್ಲ. ಚಳಿಗಾಲ ಆಗಿರುವುದರಿಂದ ರಾತ್ರಿ 11 ರಿಂದ ಬೆಳಗ್ಗೆ 5ರ ವರೆಗೆ ಮನೆಯಲ್ಲಿರುವುದೇ ಸುರಕ್ಷಿತ. ಇನ್ನು ರಾತ್ರಿ ಪಾಳಿ ವೇಳೆ ಸಂಸ್ಥೆಗಳಲ್ಲಿ ಶೇ.50 ರಷ್ಟು ಸಿಬ್ಬಂದಿಗಷ್ಟೇ ಅವಕಾಶ ಕೊಡಬೇಕು. ರೂಪಾಂತರಿತ ಕೊರೋನಾ ಬಗ್ಗೆ ಎಚ್ಚರಿಕೆ ಅಗತ್ಯ. ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮತ್ತು ಮಾಸ್ಕ್ ಧಾರಣೆ ಕಡ್ಡಾಯ ಮತ್ತು ಅನಿವಾರ್ಯ