ಭೋಪಾಲ್: ಕೇಂದ್ರ ಸರ್ಕಾರಕ್ಕೆ ರೈತರ ಒಳಿತೇ ಮುಖ್ಯವಾಗಿದ್ದು, ನೂತನ ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸಂಬಂಸಿದಂತೆ ರೈತರಿಗೆ ಏನೇ ಸಮಸ್ಯೆಯಿದ್ದರೂ ತಲೆಬಾಗಿ ಆಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಜತೆಗೆ ಕಾಯ್ದೆ ಕುರಿತಂತೆ ರೈತರಿಗೆ ಕೈಮುಗಿದು ಪ್ರತಿಯೊಂದು ವಿಷಯದ ಬಗ್ಗೆಯೂ ಚರ್ಚಿಸಲು ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಆನ್ಲೈನ್ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದ್ದು, ಕಾಯ್ದೆಯಿಂದ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ತೆಗೆದು ಹಾಕಲಾಗುತ್ತದೆ ಎಂಬುದು ಶುದ್ಧ ಸುಳ್ಳು. ಎಂಎಸ್ಪಿ ವ್ಯವಸ್ಥೆ ಹೀಗೆ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ.
ಈ ನೂತನ ಕಾಯ್ದೆಗಳನ್ನು ರಾತ್ರೋರಾತ್ರಿ ತರಲಾಗಿಲ್ಲ. ಕಳೆದ 22 ವರ್ಷದಲ್ಲಿ ಪ್ರತಿಯೊಂದು ಸರ್ಕಾರವು, ಪ್ರತಿಯೊಂದು ರಾಜ್ಯ ಸರ್ಕಾರವೂ ವಿವರವಾಗಿ ಚರ್ಚಿಸಿದೆ. ರೈತ ಸಂಘಟನೆಗಳು, ಕೃಷಿ ತಜ್ಞರು, ಆರ್ಥಿಕ ತಜ್ಞರು, ವಿಜ್ಞಾನಿಗಳು ಕೃಷಿ ವಲಯದಲ್ಲಿ ಸುಧಾರಣೆ ತರುವ ಬಗ್ಗೆ ಒತ್ತು ನೀಡಿವೆ. ಇಂದು ಯಾವ ಪಕ್ಷಗಳು ಕಾಯ್ದೆಗಳಿಗೆ ವಿರೋಸುತ್ತಿವೆಯೋ, ಅದೇ ಪಕ್ಷಗಳು ಈ ಕಾಯ್ದೆಗಳ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದವು ಎಂದು ಮೋದಿ ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಕಾಯ್ದೆ ಜಾರಿಯಿಂದ ವಿಪಕ್ಷಗಳಿಗೆ ಅತೀವ ನೋವುಂಟಾಗಿದೆ. ನಮ್ಮಿಂದ ಸಾಧ್ಯವಾಗದ ಕಾರ್ಯವನ್ನು ಮೋದಿ ಹೇಗೆ ಮಾಡಲು ಸಾಧ್ಯ? ಮೋದಿಗೆ ಏಕೆ ಎಲ್ಲ ಮನ್ನಣೆ ಸಿಗಬೇಕು? ಎಂದು ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದಾರೆ. ಇವರಿಗೆ ನನ್ನ ಪ್ರತಿಕ್ರಿಯೆ ಏನೆಂದರೆ ನನಗೆ ಯಾವುದೇ ಮನ್ನಣೆ ಬೇಡ. ಎಲ್ಲ ಮನ್ನಣೆಯು ನಿಮ್ಮ ಚುನಾವಣೆ ಪ್ರಣಾಳಿಕೆಗೆ ಸಿಗಲಿ. ನನಗೆ ರೈತರ ಬದುಕು ಉತ್ತಮಗೊಳ್ಳುವುದು ಮಾತ್ರವೇ ಬೇಕಿದ್ದು, ರೈತರನ್ನು ದಿಕ್ಕು ತಪ್ಪಿಸುವ ಕಾರ್ಯ ನಿಲ್ಲಿಸಿ ಎಂದಿದ್ದಾರೆ.