ಬೆಂಗಳೂರು: ಅನಿರ್ದಿಷ್ಟಾವಗೆ ಮುಂದೂಡಿಕೆಯಾಗಿದ್ದ ವಿಧಾನಪರಿಷತ್ ಕಲಾಪ ಸರ್ಕಾರದ ಕೋರಿಕೆ ಮೇರೆಗೆ ಮಂಗಳವಾರ ನಡೆಯಲಿದೆ.
ಗುರುವಾರ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆಯಾಗದೇ ಇರುವುದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕರು, ಸಭಾಪತಿಗಳ ಮೇಲಿನ ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಅವಕಾಶ ನೀಡದೇ ಇರುವುದಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ ಅವೇಶನ ನಡೆಯಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದು, ಇದೀಗ ಮಂಗಳವಾರ ನಡೆಯಲಿರುವ ಕಲಾಪದಲ್ಲಿ ಅವಿಶ್ವಾಸ ನಿರ್ಣಯ, ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆ ಕುರಿತು ನಿರ್ಧಾರವಾಗಲಿದೆ.
ಸದನದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಾರ್ಯದರ್ಶಿಗಳ ಮಖಾಂತರ ಸದಸ್ಯರಿಗೆ ಉತ್ತರ ನೀಡುವುದಾಗಿ ಹೇಳಿದ್ದ ಸಭಾಪತಿ ಸದನವನ್ನು ಅನಿರ್ದಿಷ್ಟಾವಗೆ ಮುಂದೂಡಿದ್ದರು. ಹೀಗಾಗಿ ತಮ್ಮ ನಿರ್ಣಯವನ್ನು ಸದನದಲ್ಲಿ ಪ್ರಸ್ತಾಪಿಸಿಲ್ಲ ಎಂದು ಆಡಳಿತ ಪಕ್ಷ ಮಂಗಳವಾರ ನಡೆಯಲಿರುವ ಕಲಾಪವನ್ನು ಉಪಸಭಾಪತಿಗಳು ನಡೆಸಬೇಕು ಎಂದು ಪಟ್ಟುಹಿಡಿದಿದೆ. ಅಲ್ಲದೇ ಕಲಾಪ ಸಲಹಾ ಸಮಿತಿ ಸಭೆಯನ್ನೂ ಉಪಸಭಾಪತಿಗಳು ನಡೆಸುವಂತೆ ಪತ್ರಬರೆದಿದೆ.
ಸಭಾಪತಿಗಳಿಗೆ ಬರೆದ ಪತ್ರದಲ್ಲಿ ತಮಗೆ ಯಾವುದೇ ರೀತಿಯ ಕಾನೂನಿನ ಅಕಾರ ಇಲ್ಲದಿದ್ದರೂ ಅವಿಶ್ವಾಸ ನಿರ್ಣಯ ಕ್ರಮ ಬದ್ಧವಾಗಿಲ್ಲವೆಂದು ಆದೇಶಿಸಿ ಕಾರ್ಯದರ್ಶಿಗಳ ಮುಖಾಂತರ ನಮಗೆ ಹಿಂಬರಹ ನೀಡಿರುವುದು ಕಾನೂನು ಬಾಹಿರ. ಕ್ರಮ ಬದ್ಧತೆ ಬಗ್ಗೆ ಚರ್ಚೆ ನಡೆಸಲು ವಿಧಾನಪರಿಷತ್ಗೆ ಮಾತ್ರ ಅಕಾರ ಇರುವುದೇ ಹೊರತು ತಮಗಲ್ಲ. ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಬಗ್ಗೆ ಚರ್ಚಿಸುವಾಗ ತಾವು ಅಧ್ಯಕ್ಷತೆ ವಹಿಸುವುದು ಅನುಚಿತ ಹಾಗೂ ಕಾನೂನು ವಿರುದ್ಧವಾಗಿದೆ ಎಂದು ಆಡಳಿತ ಪಕ್ಷ ಸಭಾಪತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಇತ್ತ ಉಪಸಭಾಪತಿಗಳಿಗೆ ಸಭಾಪತಿಗಳ ಮೇಲೆ ಸದಸ್ಯರು ಅವಿಶ್ವಾಸ ಸೂಚನೆ ಕೊಟ್ಟಿರುವುದರಿಂದ ಸಭಾಪತಿಗಳು ಪೀಠದಲ್ಲಿ ಆಸೀನರಾಗುವುದು ಕಾನೂನಿಗೆ ವಿರುದ್ಧವಾಗಿದೆ. ಹಾಗಾಗಿ ಡಿ.15ರಂದು ನಡೆಯಲಿರುವ ವಿಧಾನಪರಿಷತ್ ಸಭೆಯನ್ನು ಅಧ್ಯಕ್ಷತೆ ವಹಿಸಿ ಸಭಾಪತಿಗಳ ಮೇಲಿನ ಅವಿಶ್ವಾಸ ನಿರ್ಣಯ ಬಗ್ಗೆ ಚರ್ಚೆ ಮಾಡಲು ಅಗತ್ಯ ಬಿದ್ದಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡುವಂತೆ ಉಪಸಭಾಪತಿಗಳಿಗೆ ಪತ್ರ ಬರೆದಿದ್ದಾರೆ.
ಅಲ್ಲದೇ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದು ನಿರ್ದಿಷ್ಟ ಆಪಾದನೆ ಇಲ್ಲ ಎಂಬ ಉತ್ತರ ಆಶ್ಚರ್ಯಕರ. ಸಭಾಪತಿಗಳ ಮೇಲೆ ನಾವು ಮಾಡಿರುವ ಆಪಾದನೆ ಸ್ಪಷ್ಟವೇ, ನಿಖರವೇ,ಚರ್ಚೆಗೆ ಯೋಗ್ಯವೇ ಎಂದು ನಿರ್ಣಯಿಸುವ ಅಕಾರ ವಿಧಾನ ಪರಿಷತ್ತಿಗೆ ಇರುವುದೇ ಹೊರತು ಸಭಾಪತಿಗಳಿಗಲ್ಲ ಎಂದು ಉಲ್ಲೇಖಿಸಲಾಗಿದೆ.
ಪರಿಷತ್ ಕಾರ್ಯಕಲಾಪ ಪಟ್ಟಿಯಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆ ಇಲ್ಲದೇ ಇರುವುದು ಕುತೂಹಲ ಮೂಡಿಸಿದ್ದು ಇದರಿಂದ ಸಭಾಪತಿಗಳೇ ಕಲಾಪವನ್ನು ನಡೆಸುವುದು ಸ್ಪಷ್ಟವಾಗಿದೆ.
ಇತ್ತ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷಗಳು ಪರಿಷತ್ತಿನಲ್ಲಿ ಇಂದು ಮಂಡನೆಯಾಗಬಹುದಾದ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕಕ್ಕೆ ಯಾವ ರೀತಿ ಬೆಂಬಲ ಕೊಡಲಿವೆ? ಅಲ್ಲದೇ ಅವಿಶ್ವಾಸ ನಿರ್ಣಯವನ್ನು ಕಾರ್ಯಕಲಾಪ ಪಟ್ಟಿಯಲ್ಲಿ ಸೇರದೇ ಇರುವುದರಿಂದ ವಿಪಕ್ಷಗಳಿಂದ ಯಾವ ರೀತಿ ಪ್ರತಿರೋಧ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.