ಬೆಂಗಳೂರು: ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಅಸ್ತು, ನಾಗಮೋಹನ ದಾಸ್ ವರದಿ ಪುನರ್ ಪರಿಶೀಲನೆಗೆ ಉಪಸಮಿತಿ ರಚನೆ, ಸಾರ್ವತ್ರಿಕ ರಜೆ, ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸೇರಿದಂತೆ ಪ್ರಮುಖ ವಿಷಯಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದ್ದು, ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ.ಸಿ ಮಾಧುಸ್ವಾಮಿ ಸಭೆಯ ನಿರ್ಧಾರಗಳ ಕುರಿತು ಮಾಹಿತಿ ನೀಡಿದರು.
ವಿಜಯನಗರ ಪ್ರತ್ಯೇಕ ಜಿಲ್ಲೆ
ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಕುರಿತು ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ. ಇದರ ರೂಪು ರೇಷೆ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದು, ಜಿಲ್ಲೆಗೆ ಯಾವ್ಯಾವ ತಾಲೂಕುಗಳು ಸೇರಬೇಕು ಮತ್ತು ರಚನೆ ಕುರಿತು ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದಿದ್ದಾರೆ. ಈ ಮೂಲಕ ದಶಕಗಳಿಂದ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಬೇಡಿಕೆ ಸಾಕಾರಗೊಳ್ಳುತ್ತಿದೆ. ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಹೊರಗುಳಿದು ರಾಜ್ಯದ 31ನೇ ಜಿಲ್ಲೆಯಾಗುವ ಕನಸು ಈಡೇರುವ ಸಮಯ ಬಂದಿದೆ.
ನಾಗಮೋಹನದಾಸ್ ವರದಿ ಮರುಪರಿಶೀಲನೆಗೆ ಸಂಪುಟ ಉಪಸಮಿತಿ
ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವ ಸಂಬಂಸಿ ನ್ಯಾ.ನಾಗಮೋಹನದಾಸ್ ಕಮಿಟಿ ನೀಡಿದ ವರದಿಯನ್ನು ಮರುಪರಿಶೀಲನೆ ನಡೆಸಲು ಸಂಪುಟ ಉಪಸಮಿತಿ ರಚನೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಪ ಸಮಿತಿಯಲ್ಲಿ ಯಾರ್ಯಾರು ಇರಬೇಕು ಎಂಬುದನ್ನು ಮುಖ್ಯಮಂತ್ರಿಗಳು ನಿರ್ಧರಿಸಲಿದ್ದಾರೆ. ಪರಿಶಿಷ್ಟ ಜಾತಿಗೆ ಶೇ 3-7 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 15-17ರಷ್ಟು ಹೆಚ್ಚಳ ಮಾಡುವ ಬೇಡಿಕೆ ಬಹುದಿನಗಳಿಂದ ಇದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಅಕಾರಿಗಳ ಕರ್ತವ್ಯ ಲೋಪ, ನಿರ್ಲಕ್ಷ್ಯ ಕುರಿತು ಕ್ರಮಕೈಗೊಳ್ಳಲು ಕೆಪಿಎಸ್ಸಿಗೆ ಇದ್ದ ಅಕಾರವನ್ನು ಮೊಟಕುಗೊಳಿಸಲಾಗಿದೆ. ಈ ಹಿಂದೆ ಕ್ರಮ ಕೈಗೊಳ್ಳಲು ಕೆಪಿಎಸ್ಸಿಯ ಅನುಮತಿ ಅಗತ್ಯವಾಗಿದ್ದು ಇನ್ನುಮುಂದೆ ಸರ್ಕಾರವೇ ನೇರವಾಗಿ ಕ್ರಮ ಕೈಗೊಳ್ಳುವಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.