ಉಡುಪಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರಾಗಿರುವ ಪೇಜಾವರ ಮಠಾೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮುಂದಿನ ತಿಂಗಳಾರಂಭದಲ್ಲಿ ಅಯೋಧ್ಯಾಪತಿ ಶ್ರೀರಾಮನ ದರ್ಶನ ಪಡೆದು, ಮಂದಿರ ನಿರ್ಮಾಣದ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ. ನಂತರ ದಿಲ್ಲಿಯಲ್ಲಿ ನಡೆಯುವ ವಿಶ್ವ ಹಿಂದು ಪರಿಷತ್ನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಜಯದಶಮಿಯ ದಿನವಾದ ಅ. 26ರಂದು ಉತ್ತರ ಭಾರತ ಯಾತ್ರೆಯನ್ನು ಆರಂಭಿಸುವ ಪೇಜಾವರ ಶ್ರೀಗಳು ನವೆಂಬರ್ 1ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಯಿಂದ ನ.2ರ ಮಧ್ಯಾಹ್ನ 3 ಗಂಟೆಯವರೆಗೆ ಅಯೋಧ್ಯೆಯಲ್ಲಿರುವ ಪೇಜಾವರ ಶಾಖಾ ಮಠದಲ್ಲಿರುತ್ತಾರೆ. ಈ ವೇಳೆ ಶ್ರೀರಾಮ ಜನ್ಮಕ್ಷೇತ್ರಕ್ಕೆ ತೆರಳಿ, ದೇವರ ದರ್ಶನ ಪಡೆಯಲಿದ್ದಾರೆ. ನಂತರ ಮಂದಿರ ಕಾಮಗಾರಿಯ ಪ್ರಗತಿ, ಸ್ಥಳದಲ್ಲಾಗಿರುವ ಕೆಲಸಗಳ ಪರಿಶೀಲನೆ ನಡೆಸಲಿದ್ದಾರೆ.
ಕಾಶಿ, ಹರಿದ್ವಾರ, ಬದರಿಗೂ ಭೇಟಿ
ಇದೇ ವೇಳೆ ಪೇಜಾವರ ಶ್ರೀಗಳು ಕಾಶಿ ವಿಶ್ವನಾಥನ ದರ್ಶನ ಪಡೆಯಲಿದ್ದಾರೆ. ನ. 1ರಂದು ಕಾಶಿಗೆ ತೆರಳಿ, ಅಲ್ಲಿ ವಿಶ್ವನಾಥನ ದರ್ಶನ ಪಡೆದು, ಮುಂದೆ ಅಯೋಧ್ಯೆ ಪ್ರವಾಸ ಮುಂದುವರಿಸಲಿದ್ದಾರೆ. ಅಯೋಧ್ಯೆಯಿಂದ ನ. 3ರಂದು ಹರಿದ್ವಾರಕ್ಕೆ ತೆರಳಲಿದ್ದಾರೆ. ನಂತರ ನ. 5ರಂದು ಬದರೀನಾಥ ದರ್ಶನ ಪಡೆಯಲಿದ್ದಾರೆ. ತೀರ್ಥಕ್ಷೇತ್ರಗಳ ಯಾತ್ರೆ ಮುಗಿಸಿ, 9ರಂದು ದಿಲ್ಲಿಗೆ ತೆರಳಲಿದ್ದಾರೆ. ಅಲ್ಲಿ ವಿಶ್ವ ಹಿಂದು ಪರಿಷತ್ನ ಪ್ರಮುಖರು ನ. 10 ಮತ್ತು 11ರಂದು ಆಯೋಜಿಸಿರುವ ಸಭೆಯಲ್ಲಿ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ.
ರಾಮಮಂದಿರಕ್ಕೆ ಭೂಮಿ ಪೂಜೆ ನಡೆದ ಸಂದರ್ಭದಲ್ಲಿ ದಕ್ಷಿಣ ಭಾರತದಾದ್ಯಂತ ನವೆಂಬರ್-ಡಿಸೆಂಬರ್ನಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭಕ್ತರಿಂದ ನಿ ಸಂಗ್ರಹಕ್ಕೆ ಅಭಿಯಾನ ನಡೆಸುವ ಆಶಯ ವ್ಯಕ್ತಪಡಿಸಿದ್ದ ಪೇಜಾವರ ಶ್ರೀಗಳು ಅಯೋಧ್ಯೆಗೆ ಭೇಟಿ ನೀಡುತ್ತಿರುವುದು ಅಭಿಯಾನಕ್ಕೆ ಮುನ್ನುಡಿಯಂತಾಗಿದೆ. ನ. 15ಕ್ಕೆ ಉಡುಪಿಗೆ ಮರಳುವ ಶ್ರೀಗಳು ಹೊಸ ಯೋಜನೆಯನ್ನು ಹಮ್ಮಿಕೊಳ್ಳುವ ನಿರೀಕ್ಷೆಯಿದೆ.