ಶಿವಮೊಗ್ಗ: ನೂತನ ಕೃಷಿ ಮಸೂದೆಗಳ ಬಗ್ಗೆ ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಕಾಯಿದೆ ಬಗ್ಗೆ ಇರುವ ವಾಸ್ತವ ಸಂಗತಿಯನ್ನು ರೈತರಿಗೆ ತಿಳಿಸಲು ರಾಜ್ಯ ಬಿಜೆಪಿ ರೈತ ಮೋರ್ಚಾದಿಂದ ರಾಜ್ಯಾದ್ಯಂತ ರೈತ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ನವೀನ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 10ರಿಂದ ನವೆಂಬರ್ 10ರವರೆಗೆ ರೈತ ಮೋರ್ಚಾದ ರಾಜ್ಯ ಪದಾಕಾರಿಗಳು ತಮ್ಮ ತಮ್ಮ ವಿಭಾಗಗಳ ಜಿಲ್ಲಾ ಪ್ರವಾಸ ಕೈಗೊಂಡು ಜಿಲ್ಲಾ ಪದಾಕಾರಿಗಳ ಸಭೆ ಹಾಗೂ ಜಿಲ್ಲೆಯ ಕನಿಷ್ಠ 10 ಗ್ರಾಮದಲ್ಲಿ ರೈತ ಜಾಗೃತಿ ಅಭಿಯಾನ ನಡೆಸಲು ಸೂಚಿಸಲಾಗಿದೆ ಎಂದರು.
ಪ್ರತಿ ಮಂಡಲದಲ್ಲೂ ಐದು ಗ್ರಾಮಸಭೆ:
ಅಕ್ಟೋಬರ್ 18ರಿಂದ 31ರವರೆಗೆ ರೈತ ಮೋರ್ಚಾದ ಜಿಲ್ಲಾ ಪದಾಕಾರಿಗಳು ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲ ಮಂಡಲದಲ್ಲಿ ಪದಾಕಾರಿಗಳ ಸಭೆ ಹಾಗೂ ಪ್ರತಿ ಮಂಡಲದಲ್ಲಿ ಕನಿಷ್ಠ ಐದು ಗ್ರಾಮಸಭೆ ನಡೆಸಲು, ಅಕ್ಟೋಬರ್ 25ರಿಂದ 31ರವರೆಗೆ ಮಂಡಲ ಪದಾಕಾರಿಗಳು ತಮ್ಮ ಮಂಡಲ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸಭೆಗಳನ್ನು ಮಾಡಿ ಕರಪತ್ರ ವಿತರಣೆ ಮಾಡಲು ಸೂಚಿಸಲಾಗಿದೆ ಎಂದರು.
ಪತ್ರಬರೆಸುವ ಚಳವಳಿ:
ಪ್ರಗತಿಪರ ರೈತರು, ಹೋರಾಟಗಾರರು, ವಿಚಾರವಾದಿಗಳು ಹಾಗೂ ಗ್ರಾಮದ ಪ್ರಮುಖ ವ್ಯಕ್ತಿಗಳನ್ನು ಸಂಪರ್ಕಿಸಿ ಮಸೂದೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಹಾಗೂ ಅ.10ರಿಂದ 31ರವರೆಗೆ ರೈತರ ಪರ ನಿಲುವು ತೆಗೆದುಕೊಂಡ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ರೈತರಿಂದ ಅಭಿನಂದನಾ ಪತ್ರ ಬರೆಸುವ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಎಪಿಎಂಸಿ ಮುಚ್ಚುವ ಆತಂಕವಿಲ್ಲ :
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂತ ಮೂರು ಮಸೂದೆಗಳಿಂದ ಕೃಷಿ ಉತ್ಪನ್ನಗಳ ದಾಸ್ತಾನು, ಸಂಗ್ರಹ, ಸಾಗಣೆ, ಆಹಾರ ಸಂಸ್ಕರಣೆ ಹಾಗೂ ರಫ್ತಿಗೆ ಅವಕಾಶವಿದೆ. ಎಪಿಎಂಸಿ ಮಂಡಿಗಳ ಹೊರತಾಗಿಯೂ ಬೇರೆ ಜಿಲ್ಲೆ, ಬೇರೆ ರಾಜ್ಯಗಳಲ್ಲೂ ಉತ್ಪನ್ನ ಮಾರಾಟಕ್ಕೆ ಅವಕಾಶ. ಕೃಷಿ ನೂತನ ಕಾಯ್ದೆ ಜರಿಯಿಂದ ಎಪಿಎಂಸಿಗಳ ನಿಷೇಧವಿಲ್ಲ. ಮಸೂದೆಯಿಂದ ಮಾರುಕಟ್ಟೆಯಲ್ಲಿ ಉತ್ಪನ್ನದ ಬೆಲೆ ಏರಿಕೆಯಾದರೆ ನೇರವಾಗಿ ರೈತರಿಗೆ ಲಾಭವಾಗಲಿದೆ. ಬೆಲೆ ಕುಸಿದರೆ ಸರ್ಕಾರ ಬೆಂಬಲ ಬೆಲೆಯ ನೆರವು ಒದಗಿಸಲಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿ ಕಲ್ಯಾಣಕ್ಕಾಗಿ ಹಲವಾರು ಮಸೂದೆಗಳಿಗೆ ತಿದ್ದುಪಡಿ ಮಾಡಿ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಐತಿಹಾಸಿಕ ರೈತಪರ ನಿಲುವು ತೆಗೆದುಕೊಂಡಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ಕೃಷಿ ಭೂಮಿ ಖರೀದಿಗೆ ಹೆಚ್ಚು ಅವಕಾಶ, ರಾಜ್ಯದ ಆರ್ಥಿಕಾಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಕೃಷಿಯೇತರ ಭೂಮಿ ಖರೀದಿಯಿಂದ ಹೈನೋದ್ಯಮ, ಕುರಿ, ಮೇಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳಲ್ಲಿ ಯುವಕರು ತೊಡಗಿಸಿಕೊಳ್ಳಲು ವಿಫುಲ ಅವಕಾಶ, ಕೃಷಿ ಕ್ಷೇತ್ರದಲ್ಲೂ ಹೂಡಿಕೆದಾರರ ಸೃಷ್ಟಿ, ಕೈಗಾರಿಕೆಗೆ ಸರಿಸಮಾನವಾಗಿ ಕೃಷಿ ಮತ್ತು ಕೃಷಿಯಾಧಾರಿತ ಕೈಗಾರಿಕೆಗಳ ಅಭಿವೃದ್ಧಿಗೆ ವೇಗ ಸೇರಿದಂತೆ ಹಲವಾರು ಅನುಕೂಲಗಳಿವೆ ಎಂದರು.
ರೈತ ಮೋರ್ಚಾದ ಮಂಡೇನಕೊಪ್ಪ ಗಂಗಾಧರ್, ಕೃಷ್ಣೋಜಿರಾವ್, ಹಾಲೇಶ್, ವಿನ್ಸೆಂಟ್ ರೋಡ್ರಿಗಸ್, ಬೇಳೂರು ತಿಮ್ಮಪ್ಪ, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.