ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ ಮೇಲೆ ಕೇರಳದಲ್ಲಿ ದಾಳಿ, ಹತ್ಯೆಗೆ ಯತ್ನ :ಕೇಸ್

ಮಲಪ್ಪುರಂ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಣ್ಣೂರು ಜಿಲ್ಲೆಯ ಎ.ಪಿ.ಅಬ್ದುಲ್ಲ ಕುಟ್ಟಿ ಅವರು ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ಕೇರಳದಲ್ಲಿ ಅವರ ಹತ್ಯೆಗೆ ಯತ್ನ ನಡೆದಿದೆ.
ಗುರುವಾರ ರಾತ್ರಿ ಮಲಪ್ಪುರಂ ಜಿಲ್ಲೆಯ ರಂಡತ್ತಾಣಿ ಎಂಬಲ್ಲಿ ನಡೆದ ಆಕ್ರಮಣಕ್ಕೆ ಸಂಬಂಸಿ ಟೋರಸ್ ಲಾರಿ ಚಾಲಕನ ವಿರುದ್ಧ ಕಾಡಂಪುಯ ಪೊಲೀಸರು ಹತ್ಯೆ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಮಲಪ್ಪುರಂ ವೆಂಜಾರ ನಿವಾಸಿ ಸುಸೈಲ್ ಎಂಬಾತ ಅವರ ಹತ್ಯೆಗೆ ಸಂಚು ನಡೆಸಿದ ಆರೋಪಿಯಾಗಿದ್ದು , ಇದೀಗ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ
ತಿರುವನಂತಪುರದಿಂದ ಕಣ್ಣೂರಿಗೆ ಅ.8ರಂದು ರಾತ್ರಿ ಕಾರಿನಲ್ಲಿ ಬರುತ್ತಿದ್ದ ವೇಳೆ ಪೊನ್ನಾನಿ ಎಂಬಲ್ಲಿ ಚಹಾ ಕುಡಿಯಲೆಂದು ಹೊಟೇಲ್‍ಗೆ ಆಗಮಿಸಿದ ಅಬ್ದುಲ್ಲಕುಟ್ಟಿಯವರನ್ನು ಅಲ್ಲಿದ್ದ ತಂಡವೊಂದು ಅಪಹಾಸ್ಯಗೈದಿದೆ. ಬಳಿಕ ಅಬ್ದುಲ್ಲ ಕುಟ್ಟಿಯವರ ಕಾರನ್ನು ಹಿಂಬಾಲಿಸಿಕೊಂಡು ಬಂದ ಟೋರಸ್ ಲಾರಿ ಕಾರಿಗೆ ಎರಡು ಬಾರಿ ಡಿಕ್ಕಿ ಹೊಡೆದಿದೆ. ಈ ಸಂಬಂಧ ಅಬ್ದುಲ್ಲಕುಟ್ಟಿಯವರ ಜತೆಗಿದ್ದ ಕಣ್ಣೂರಿನ ಯುವಮೋರ್ಚಾ ಕಾರ್ಯಕರ್ತ ಅರುಣ್ ಎಂಬವರು ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಸಿ ಹೆಚ್ಚಿನ ತನಿಖೆ ನಡೆಸುವುದಾಗಿ ಕಾಡಂಪುಯ ಎಸ್‍ಐ ಕೆ.ಎನ್. ಮನೋಜ್ ತಿಳಿಸಿದ್ದಾರೆ.
ಪೂರ್ವಯೋಜಿತ ಕೃತ್ಯ: ಬಿಜೆಪಿ ಆರೋಪ
ಅಬ್ದುಲ್ಲಕುಟ್ಟಿಯವರ ಮೇಲೆ ನಡೆದ ಈ ಕೃತ್ಯ ಪೂರ್ವಯೋಜಿತ ಕೃತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದರು. ಅಲ್ಪ ಸಂಖ್ಯಾತ ಸಮುದಾಯದ ಬಿಜೆಪಿ ನೇತಾರ ಉನ್ನತ ಪದವಿಗೇರಿದ ಅಸೂಯೆಯಿಂದ ಈ ಕೃತ್ಯ ನಡೆಸಲಾಗಿದೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ