ಕಾಲುನೋವಿನ ತಂದೆಯನ್ನು 1,200 ಕಿ.ಮೀ ಸೈಕಲ್‍ನಲ್ಲೇ ಕರ್ಕೊಂಡು ಬಂದ ಗಟ್ಟಿಗಿತ್ತಿ!

ಪಾಟ್ನಾ: ಇದು 15 ವರ್ಷದ ಬಾಲಕಿಯ ಧೈರ್ಯ ಮತ್ತು ದಿಟ್ಟ ನಿರ್ಧಾರದ ನೈಜ ಕಥೆಯಾಗಿದೆ. ಲಾಕ್‍ಡೌನ್‍ನಿಂದಾಗಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯನ್ನು ಸೈಕಲಿನಲ್ಲಿ ಕೂರಿಸಿಕೊಂಡು 1,200 ಕಿ.ಮೀ ಕ್ರಮಿಸಿ ಧೈರ್ಯ ಮೆರೆದಿದ್ದಾಳೆ.

ದೆಹಲಿಯಿಂದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ಸೈಕಲಿನಲ್ಲಿ ಕ್ರಮಿಸಿದ ಜ್ಯೋತಿ, ಈ ಮಧ್ಯೆ ಹಲವು ಏಳು- ಬೀಳುಗಳನ್ನು ಎದುರಿಸಿಕೊಂಡು ತನ್ನ ತಂದೆಯ ಜೊತೆ ಕೊನೆಗೂ ಊರು ಸೇರಿದ್ದಾಳೆ. ಮೇ 10ರಂದು ಜ್ಯೋತಿ ದೆಹಲಿಯಿಂದ ಹೊರಟಿದ್ದಾಳೆ. ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಜ್ಯೋತಿ ಅಪ್ಪ ಕುಳಿತಿದ್ದರು.

ನಾವು ತುಂಬಾನೇ ಬಡವರಾಗಿದ್ದು, ನಮ್ಮ ಕೈಯಲ್ಲಿ ಅಲ್ಪ-ಸ್ವಲ್ಪ ಹಣವಿತ್ತು. ಬಾಡಿಗೆ ಮನೆಯಲ್ಲಿದ್ದ ನಮ್ಮನ್ನ ಮಾಲೀಕ ಒಂದಾ ನೀವು ಹಣ ಪಾವತಿಸಬೇಕು, ಇಲ್ಲವೆಂzಲ್ಲಿ ಮನೆ ಖಾಲಿ ಮಾಡಬೇಕು ಎಂದು ಗದರಿದ್ದಾನೆ. ಇದು ನಮ್ಮನ್ನ ಹತಾಶರನ್ನಾಗಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಾವು ನಮ್ಮ ಹಳ್ಳಿಗೆ ವಾಪಸ್ ಹೋಗಲು ನಿರ್ಧರಿಸಿದ್ದು, ಟ್ರಕ್ ಚಾಲಕನ ಬಳಿ ನಮ್ಮನ್ನು ಕರೆದೊಯ್ಯುವಂತೆ ಕೇಳಿಕೊಂಡೆವು. ಆಗ ಆತ 6,000 ನೀಡಬೇಕು ಎಂದು ತಿಳಿಸಿದನು. ಆದರೆ ಆತನಿಗೆ ಹಣ ಕೊಡುವಷ್ಟು ನಮ್ಮ ಬಳಿ ಹಣವಿರಲಿಲ್ಲ. ಹೀಗಾಗಿ ನನ್ನ ತಂದೆ 500 ರೂ. ನೀಡಿ ಒಂದು ಸೈಕಲ್ ಖರೀದಿಸಿದ್ದು, ಅದರಲ್ಲೇ ದರ್ಭಾಂಗಕ್ಕೆ ತಲುಪಿದೆವು ಎಂದು ಜ್ಯೋತಿ ಕುಮಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ.

ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದರ ಪರಿಣಾಮ ಪ್ರವಾಸಿ ಕಾರ್ಮಿಕರು ತಮ್ಮ ಮನೆಗಳತ್ತ ತೆರಳಲು ಬಸ್ ಇಲ್ಲದೆ ನರಕಯಾತನೆ ಅನುಭವಿಸಿದ್ದಾರೆ. ಅನೇಕರು ಲಾರಿ, ಟ್ರಕ್ ಗಳಲ್ಲಿ ತಮ್ಮ ತಮ್ಮ ಊರುಗಳತ್ತ ತೆರಳಿದರೆ, ಇನ್ನೂ ಕೆಲವರು ಕಾಲ್ನಡಿಗೆಯಲ್ಲೇ ಸಾವಿರಾರು ಕಿ.ಮೀ ಕ್ರಮಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಇಂತದ್ದೇ ಕಥೆ ಜ್ಯೋತಿ ಮತ್ತು ಆಕೆಯ ತಂದೆಯದ್ದಾಗಿದೆ.

ನಾನು ರಾತ್ರಿ ಹೊತ್ತು ಕೂಡ ಸೈಕಲ್ ಓಡಿಸಿದ್ದೇನೆ. ನನಗೆ ಯಾವುದೇ ರೀತಿಯ ಭಯವಾಗಿರಲಿಲ್ಲ. ಆದರೆ ಭಯವಾಗುತ್ತಿದ್ದಿದ್ದು ಒಂದೇ ಕಾರಣಕ್ಕಾಗಿ. ಅದೇನಂದರೆ ಯಾರಾದರೂ ಹಿಂದಿನಿಂದ ಬಂದು ನಮ್ಮ ಸೈಕಲ್ ಗೆ ಗುದ್ದಿ ಬಿಟ್ಟರೆ ಅನ್ನೋದು ಭಯವಾಗಿತ್ತು. ಆದರೆ ದೇವರ ದಯೆಯಿಂದ ಅಂತಹ ಘಟನೆ ನಡೆಯಲಿಲ್ಲ ಎಂದು ಜ್ಯೋತಿ ವಿವರಿಸಿದ್ದಾಳೆ.

ಜ್ಯೋತಿಯ ತಂದೆ ದೆಹಲಿಯಲ್ಲಿ ಇ-ರಿಕ್ಷಾ ಚಾಲಕರಾಗಿದ್ದರು. ಆದರೆ ಮಾರ್ಚ್ 25ರಿಂದ ಲಾಕ್ ಡೌನ್ ಹೇರಲಾದ ಪರಿಣಾಮ ತನ್ನ ಬಳಿಯಿದ್ದ ರಿಕ್ಷಾವನ್ನು ಮಾಲೀಕನಿಗೆ ಕೊಟ್ಟಿದ್ದಾರೆ. ಆ ನಂತರ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುತ್ತಿದ್ದರು.

ಮೊದಲೇ ಕಾಲು ನೋವಿನಿಂದ ಬಳಲುತ್ತಿದ್ದ ಜ್ಯೋತಿ ತಂದೆಗೆ ನಡೆದಾಡಲು ಕಷ್ಟವಾಗುತ್ತಿತ್ತು. ಅವರ ಬಳಿ 600 ರೂ. ಮಾತ್ರ ಇತ್ತು. ದಾನಿಗಳ ನೆರವಿನಿಂದ ಹಾಗೂ ಕ್ಯಾಂಪ್ ಗಳು ನೀಡುವ ಆಹಾರದ ಮೂಲಕ ದಿನಕಳೆಯುತ್ತಿದ್ದೆವು ಎಂದಿದ್ದಾಳೆ. ಒಟ್ಟಿನಲ್ಲಿ ಹೇಗೋ ಕಷ್ಟಪಟ್ಟು ತಾಯ್ನಾಡಿಗೆ ಬಂದು ಸೇರಿದ ಜ್ಯೋತಿ ಹಾಗೂ ಆಕೆಯ ತಂದೆಯನ್ನು ಕ್ವಾರಂಟೈನ್ ಮಾಡಲಾಯಿತು. ಆದರೆ ಕ್ವಾರಂಟೈನ್ ಕೇಂದ್ರದಲ್ಲಿ ಜ್ಯೋತಿ ಒಬ್ಬಳೇ ಹುಡುಗಿಯಾಗಿದ್ದಳು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ