ನರೇಗಾಗೆ ಹೆಚ್ಚುವರಿ 40,000 ಕೋಟಿ ರೂ. ಪ್ಯಾಕೇಜ್

ನವದೆಹಲಿ: ಕೊರೊನಾ ಉಂಟು ಮಾಡಿದ ಆರ್ಥಿಕ ಸಂಕಷ್ಟ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು 5ನೇ ಹಂತದ ಪ್ಯಾಕೇಜ್ ಘೋಷಿಸಿದೆ. ಈ ಪೈಕಿ ನರೇಗಾಗೆ ಹೆಚ್ಚುವರಿ 40,000 ಕೋಟಿ ರೂ. ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿತ್ತ ಸಚಿವೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೈಗೊಂಡ ಪ್ರಮುಖ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಷ್ಟೇ ಅಲ್ಲದೆ ಕಿಸಾನ್ ಸಮ್ಮಾನ್ ಯೋಜನೆ, ಜನ್‍ಧನ್ ಖಾತೆಗಳಿಗೆ ಹಣ ಹಾಕಿರುವ ಬಗ್ಗೆ ಮಾಹಿತಿ ನೀಡಿದರು.

ಲಾಕ್‍ಡೌನ್‍ನಿಂದಾಗಿ ಪಡಿತರ ಹಾಗೂ ದ್ವಿದಳ ಧಾನ್ಯಗಳನ್ನು 3 ತಿಂಗಳ ಮುಂಚಿತವಾಗಿ ನೀಡಲಾಯಿತು. ಸವಾಲುಗಳ ಹೊರತಾಗಿಯೂ, ಭಾರತದ ಆಹಾರ ನಿಗಮ, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು ದ್ವಿದಳ ಧಾನ್ಯ ಮತ್ತು ಧಾನ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಿದೆ. ಇದನ್ನು ನಾನು ಪ್ರಶಂಸಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಭೂಮಿ, ಕಾರ್ಮಿಕರು, ಬಂಡವಾಳ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಸಹಾಯಕವಾಗಲಿದೆ. ಲಾಕ್‍ಡೌನ್ ಬೆನ್ನಲ್ಲೇ ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಈಗಲೂ ದೇಶದ ಜನರ ಹಿತಕ್ಕಾಗಿ ಬೃಹತ್ ಮೊತ್ತದ ಪ್ಯಾಕೇಜ್ ಘೋಷಿಸಿದೆ ಎಂದು ಹೇಳಿದರು.

ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಜನರಿಗೆ ನೇರವಾಗಿ ಹಣ ವರ್ಗಾವಣೆ ಮಾಡಲು ತಂತ್ರಜ್ಞಾನವನ್ನು ಬಳಸಲಾಯಿತು. ಕಿಸಾನ್ ಸಮ್ಮಾನ್ ಯೋಜನೆ ಅಡಿ 8.19 ಕೋಟಿ ರೈತರಿಗೆ ಒಂದು ಕಂತಿನ 2,000 ರೂ. ವರ್ಗಾವಣೆ ಮಾಡಲಾಗಿದೆ. ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ (ಎನ್‍ಎಸ್‍ಎಪಿ) ಅಡಿ ಫಲಾನುಭವಿಗಳಿಗೆ ಮೊದಲ ಕಂತಿನಲ್ಲಿ 1,405 ಕೋಟಿ ರೂ. ಮತ್ತು ಎರಡನೇ ಕಂತಿನಲ್ಲಿ 1,402 ಕೋಟಿ ರೂ., ಸುಮಾರು 3,000 ಕೋಟಿ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.

ಜನಧನ್ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ 10,025 ಕೋಟಿ ರೂ. ಹಾಗೂ 2.2 ಕೋಟಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ 3,950 ಕೋಟಿ ರೂ. ನೀಡಲಾಗಿದೆ. ಜೊತೆಗೆ 6.81 ಕೋಟಿ ಜನರಿಗೆ ಉಚಿತ ಎಲ್‍ಪಿಜಿ ಸಿಲಿಂಡರ್ ಗಳನ್ನು ನೀಡಲಾಗಿದೆ ಎಂದರು.

ಕಾರ್ಮಿಕರಿಗೆ ಸ್ಥಳಾಂತರಗೊಳ್ಳಲು ಸಾಧ್ಯವಾದಾಗ ಶ್ರಮಿಕ್ ವಿಶೇಷ ರೈಲುಗಳನ್ನು ಪ್ರಾರಂಭಿಸಲಾಯಿತು. ಕಾರ್ಮಿಕರನ್ನು ನಿಲ್ದಾಣಗಳಿಗೆ ಕರೆತರಲು ರಾಜ್ಯಗಳನ್ನು ಕೋರಲಾಯಿತು. ಈ ಮೂಲಕ ಕೇಂದ್ರ ಸರ್ಕಾರ ಶೇ. 85 ವೆಚ್ಚವನ್ನು ಭರಿಸಿ ವಲಸೆ ಕಾರ್ಮಿಕರನ್ನು ಅವರ ಊರು ಗಳಿಗೆ ಕಳುಹಿಸಿಕೊಡಲಾಯಿತು ಎಂದರು.

ರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ:
ಕೋವಿಡ್-19 ನಿಯಂತ್ರಕ್ಕಾಗಿ ಕೇಂದ್ರ ಸರ್ಕಾರವು ಹಲವಾರು ಆರೋಗ್ಯ ಸಂಬಂಧಿತ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯಗಳು, ಅಗತ್ಯ ವಸ್ತುಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳು ಮತ್ತು ಕಿಟ್‍ಗಳಿಗೆ, ಆರೋಗ್ಯ ಸೇತು ಆ್ಯಪ್ ಬಿಡುಗಡೆ ಮತ್ತು ಸಾಕಷ್ಟು ಪಿಪಿಇಗಳ ತಯಾರಿಕೆಗೆ ಭಾರೀ ಮೊತ್ತದಲ್ಲಿ ವೆಚ್ಚ ಮಾಡಲಾಗಿದೆ. ಈ ಮೂಲಕ 15 ಸಾವಿರ ಕೋಟಿ ರೂ. ಫೋಷಿಸಲಾಗಿದೆ. ಈ ಪೈಕಿ ರಾಜ್ಯಗಳಿಗೆ 4,113 ಕೋಟಿ ರೂ, ನೀಡಿದರೆ, ಅಗತ್ಯ ವಸ್ತುಗಳಿಗಾಗಿ 3,750 ಕೋಟಿ ರೂ, ವೆಚ್ಚ ಮಾಡಲಾಗಿದೆ. ಕೊರೊನಾ ಟೆಸ್ಟ್ ಲ್ಯಾಪ್ ಹಾಗೂ ಕಿಟ್‍ಗಳಿಗಾಗಿ 550 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

4,113 ಕೋಟಿ ರೂ.ಗೂ ಹೆಚ್ಚು ಹಣವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಪ್ರತಿಯೊಬ್ಬ ವೈದ್ಯಕೀಯ ಸಿಬ್ಬಂದಿಗೆ 50 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಘೋಷಿಸಲಾಗಿದೆ. ಜೊತೆಗೆ ಅವರ ರಕ್ಷಣೆಗಾಗಿ ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದರು.

 

ಮುಖ್ಯಾಂಶಗಳು:
* ಉದ್ಯೋಗ ಉತ್ತೇಜನ ನೀಡಲು ಸರ್ಕಾರ ಈಗ ನರೇಗಾಗೆ ಹೆಚ್ಚುವರಿ 40,000 ಕೋಟಿ ರೂ.ಗಳನ್ನು ನೀಡಲಿದೆ.
* ಇದು ಒಟ್ಟು ಸುಮಾರು 300 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಲು ಇದು ಸಹಾಯಕವಾಗಿದೆ.
* ಇದು ಹೆಚ್ಚಿನ ಕೆಲಸಕ್ಕಾಗಿ ಮಾನ್ಸೂನ್ ಋತುವಿನಲ್ಲಿ ಹಿಂದಿರುಗಿದ ವಲಸೆ ಕಾರ್ಮಿಕರನ್ನು ಒಳಗೊಂಡಿದೆ.

* ನೀರಿನ ಸಂರಕ್ಷಣಾ ಕಾಮಗಾರಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಬಾಳಿಕೆ ಬರುವ ಮತ್ತು ಜೀವನೋಪಾಯ ಕಲ್ಪಿಸುವ ಕಾಮಗಾರಿ ಕೈಗೊಳ್ಳಲಾಗುವುದು.
* ಇದು ಹೆಚ್ಚಿನ ಉತ್ಪಾದನೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲಿದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ