ಕೂಲಿ ಕಾರ್ಮಿಕರು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಊರಿಗೆ ಹೋಗಲು ಸಿಂಗಲ್ ಫೇರ್ ದರ: ಸಚಿವ ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದ ಕೂಲಿಕಾರ್ಮಿಕರ ತಮ್ಮ ತಮ್ಮ ಊರುಗಳಿಗೆ ಹೋಗಲು ಕೆಎಸ್ಸಾರ್ಟಿಸಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಆದರೆ, ಬಡ ಕಾರ್ಮಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸುರೇಶ್ ಕುಮಾರ್, ಸಿಂಗಲ್ ಫೇರ್ (ಒಮ್ಮುಖ ಪ್ರಯಾಣ ದರ) ದರದಲ್ಲಿ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
“ಕೆಎಸ್​ಆರ್​ಟಿಸಿ ಬಸ್​ಗಳ ಮೂಲಕ ತಮ್ಮ ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ ಕಾರ್ಮಿಕರಿಗೆ ಸಿಂಗಲ್ ಫೇರ್ ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ನಿಶಾನೆ ತೋರಿದ್ಧಾರೆ” ಎಂದು ಶಿಕ್ಷಣ ಸಚಿವರು ಟ್ವೀಟ್ ಮಾಡಿದ್ದಾರೆ.

ಸುರೇಶ್ ಕುಮಾರ್ ಅವರ ಈ ಟ್ವೀಟ್​​ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ಧಾರೆ. ಹಲವರು ಬಡ ಕಾರ್ಮಿಕರಿಂದ ಸಿಂಗಲ್ ಫೇರ್ ಹಣ ಪಡೆಯುವುದೂ ಕೂಡ ಅಧರ್ಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೈಯಲ್ಲಿ ದುಡ್ಡೇ ಇಲ್ಲದವರಿಂದ ನೀವು ಹಣ ಹೇಗೆ ಪಡೆಯುತ್ತೀರಿ? ವಿಮಾನದದಲ್ಲಿ ಉಚಿತವಾಗಿ ಪ್ರಯಾಣಿಕರನ್ನು ಕರೆತರುತ್ತೀರಿ. ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವ ಬಡವರಿಂದ ಹಣ ವಸೂಲಿ ಮಾಡುತ್ತೀರಿ. ಒಂದು ದಿನ ಉಚಿತವಾಗಿ ಕರೆದೊಯ್ಯುವಷ್ಟೂ ಹಣ ಇಲ್ಲವೇ? ಇದೆಂಥ ಸರ್ಕಾರ ಎಂಬಿತ್ಯಾದಿ ಟೀಕೆಗಳು ಟ್ವೀಟಿಗ ವಲಯದಲ್ಲಿ ಕೇಳಿಬಂದಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ