ರೆಡ್ ಜೋನ್ ಪಟ್ಟಿಯಲ್ಲಿ ಬೆಂಗಳೂರು, ಮೈಸೂರು, ಮುಂಬೈ; ಆರೆಂಜ್ ಪಟ್ಟಿಯಲ್ಲಿ ಕರ್ನಾಟಕದ 13 ಜಿಲ್ಲೆಗಳು

ಬೆಂಗಳೂರು: ಕೊರೋನಾ ವೈರಸ್ ವಿರುದ್ಧದ ಹೋರಾಟ ನಿರೀಕ್ಷೆಮೀರಿ ಕಠಿಣವಾಗುತ್ತಿದೆ. ಕೇಂದ್ರ ಸರ್ಕಾರ ಸಕಲ ಬಲವನ್ನೂ ಪ್ರಯೋಗಿಸಿ ವೈರಸ್ ಸೋಂಕು ನಿಗ್ರಹಿಸಲು ಪ್ರಯತ್ನಿಸುತ್ತಿದೆ. ಪ್ರಕರಣಗಳ ಸಂಖ್ಯೆ 35 ಸಾವಿರ ದಾಟಿದೆ. ಸಾವಿನ ಸಂಖ್ಯೆ 1,147ಕ್ಕೆ ಏರಿದೆ. ಹಿನ್ನೆಲೆಯಲ್ಲಿ ದೇಶವ್ಯಾಪಿ ಸೋಂಕು ಅಪಾಯಕಾರಿ ಮಟ್ಟದಲ್ಲಿರುವ ಪ್ರದೇಶಗಳನ್ನ ಗುರುತಿಸಿ ರೆಡ್ ಜೋನ್ ಎಂದು ಪಟ್ಟಿ ಮಾಡಲಾಗಿದೆ. ಮೇ 3 ನಂತರವೂ ಇಲ್ಲೆಲ್ಲಾ ಲಾಕ್ಡೌನ್ ನಿಯಮಗಳು ಮುಂದುವರಿಯುವ ಸಾಧ್ಯತೆ ಇದೆ.

ವೈರಸ್ ಸೋಂಕಿನ ತೀವ್ರತೆಯ ಆಧಾರದ ಮೇಲೆ ಮೂರು ಪಟ್ಟಿ ಮಾಡಲಾಗಿದೆ. ರೆಡ್ ಜೋನ್, ಆರೆಂಜ್ ಜೋನ್ ಮತ್ತು ಗ್ರೀನ್ ಜೋನ್. ರೆಡ್​ ಜೋನ್​ನಲ್ಲಿ ಸೋಂಕಿನ ತೀವ್ರತೆ ಅಪಾಯಕಾರಿ ಮಟ್ಟದಲ್ಲಿರುತ್ತದೆ. ಬೆರಳೆಣಿಕೆ ಪ್ರಕರಣಗಳಿರುವುವು ಆರೆಂಜ್ ಪಟ್ಟಿಯಲ್ಲಿವೆ. ಕಳೆದ 15 ದಿನಗಳಿಂದ ಒಂದೂ ಪ್ರಕರಣ ದಾಖಲಾಗದೇ ಇರುವವನ್ನು ಗ್ರೀನ್ ಜೋನ್​ಗೆ ಸೇರಿಸಲಾಗಿದೆ. ಒಟ್ಟು 733 ಜಿಲ್ಲೆಗಳನ್ನ ಈ 3 ಪಟ್ಟಿಗೆ ವಿಭಾಗಿಸಲಾಗಿದೆ.

ರೆಡ್ ಜೋನ್ ಪಟ್ಟಿಯಲ್ಲಿ ದೇಶಾದ್ಯಂತ 130 ಜಿಲ್ಲೆಗಳಿವೆ. ಅದರಲ್ಲಿ ಕರ್ನಾಟಕ ಮೂರು ಜಿಲ್ಲೆಗಳಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ಕೆಂಪು ವಲಯದಲ್ಲಿವೆ.

ಬಹುತೇಕ ಮೆಟ್ರೊಪೊಲಿಟನ್ ನಗರಗಳು ಕೆಂಪು ವಲಯದಲ್ಲಿವೆ. ಬೆಂಗಳೂರು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್, ಅಹ್ಮದಾಬಾದ್ ನಗರಗಳು ಈ ಪಟ್ಟಿಯಲ್ಲಿವೆ. ಉತ್ತರ ಪ್ರದೇಶದ 19 ಜಿಲ್ಲೆಗಳು ಈ ಪಟ್ಟಿಯಲ್ಲಿವೆ. ಹಾಗೆಯೇ, ಮಹಾರಾಷ್ಟ್ರ, ತಮಿಳುನಾಡು ಮತ್ತು ದೆಹಲಿ ರಾಜ್ಯಗಳ 10ಕ್ಕೂ ಹೆಚ್ಚು ಜಿಲ್ಲೆಗಳು ಕೆಂಪು ವಲಯದಲ್ಲಿವೆ.

ಇನ್ನು ಆರೆಂಜ್ ಪಟ್ಟಿಯಲ್ಲಿ ರಾಜ್ಯದ್ 13 ಜಿಲ್ಲೆಗಳಿವೆ. ಕಲಬುರ್ಗಿ, ಬೆಳಗಾವಿ, ವಿಜಯಪುರ ಮೊದಲಾದವು ಈ ಪಟ್ಟಿಯಲ್ಲಿವೆ. ರಾಮನಗರ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳು ಹಸಿರು ವಲಯದಲ್ಲಿವೆ.

ರೆಡ್ ಜೋನ್:ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಮೈಸೂರು

ಆರೆಂಜ್ ಜೋನ್:
ಬೆಳಗಾವಿ
ವಿಜಯಪುರ
ಕಲಬುರ್ಗಿ
ಬಾಗಲಕೋಟೆ
ಮಂಡ್ಯ
ಬಳ್ಳಾರಿ
ಧಾರವಾಡ
ದಕ್ಷಿಣ ಕನ್ನಡ
ಬೀದರ್
ಚಿಕ್ಕಬಳ್ಳಾಪುರ
ಗದಗ
ಉತ್ತರ ಕನ್ನಡ
ತುಮಕೂರು
ಈ ಮೇಲಿನ ಎರಡು ಪಟ್ಟಿಗಳಲ್ಲಿ ಇಲ್ಲದ ರಾಜ್ಯದ ಇತರೆ ಜಿಲ್ಲೆಗಳೆಲ್ಲವೂ ಹಸಿರು ವಲಯದ ಪಟ್ಟಿಯಲ್ಲಿವೆ. ಮೇ 3ರ ನಂತರ ಈ ಮೂರು ಪಟ್ಟಿಗಳಿಗೆ ಪ್ರತ್ಯೆಕ ಲಾಕ್​ಡೌನ್ ನಿಯಮಗಳು ಅನ್ವಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ