ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ವರುಣನ ಆರ್ಭಟ; ಭಾರೀ ಮಳೆಗೆ ಹೊಳೆಯಂತಾದ ರಸ್ತೆಗಳು

ಬೆಂಗಳೂರು: ನಗರದಲ್ಲಿ ವಾರದ ಹಿಂದೆ ಮುಂಜಾನೆ ಕಾಣಿಸಿಕೊಂಡಿದ್ದ ವರುಣ ಮತ್ತೆ ಅಬ್ಬರಿಸಿದ್ದಾನೆ. ಮುಂಜಾನೆ ಐದು ಗಂಟೆಗೆ ಆರಂಭವಾದ ಮಳೆ ಬೆಳಗ್ಗೆ ಏಳುವರೆಯಾದರೂ ನಿಂತಿಲ್ಲ. ಭಾರೀ ಮಳೆಗೆ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ.

ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಅಲ್ಲಲ್ಲಿ ಚಿಕ್ಕದಾಗಿ ಮಳೆ ಸುರಿದಿತ್ತು. ಬೆಳಗ್ಗೆ ಐದು ಗಂಟೆಗೆ ದೊಡ್ಡದಾಗಿ ಮಳೆ ಸುರಿಯಲು ಆರಂಭವಾಗಿತ್ತು. ಮೆಜೆಸ್ಟಿಕ್, ಶಾಂತಿನಗರ, ವಿಲ್ಸನ್ ಗಾರ್ಡನ್,ಲ ಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್​, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿ ನಗರ, ಆರ್​ ಆರ್​ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಿದೆ.

ಕಳೆದ ಶುಕ್ರವಾರ ಬೆಂಗಳೂರಲ್ಲಿ ಇದೇ ಮಾದರಿಯಲ್ಲಿ ಮಳೆ ಸುರಿದಿತ್ತು. ಮುಂಜಾನೆ 6 ಗಂಟೆಯಿಂದಲೇ ಭಾರೀ ಮಳೆ ಆಗಿತ್ತು. ನಂತರ 8 ಗಂಟೆ ಹೊತ್ತಿಗೆ ಮಳೆ ಕಡಿಮೆ ಆಗಿತ್ತು.

ಮುಂಜಾನೆ ಹಾಲು-ಮೊಸರು ಇತ್ಯಾದಿ ಅಗತ್ಯ ವಸ್ತುಗಳನ್ನು ತರಲು ಜನರು ಹೊರ ನಡೆದಿದ್ದರು. ಈ ವೇಳೆ ಮಳೆಯಿಂದ ಅನೇಕರು ಪರದಾಡಿದರು. ಇನ್ನು, ಬಹುತೇಕ ಸಂಸ್ಥೆಗಳಿಗೆ ವರ್ಕ್​ ಫ್ರಮ್​ ಹೋಮ್​ ನೀಡಿವೆ. ಹೀಗಾಗಿ, ಈ ಮಳೆಯಿಂದ ಅಷ್ಟಾಗಿ ತೊಂದರೆ ಉಂಟಾಗಿಲ್ಲ.

ಭಾರೀ ಮಳೆಯಿಂದಾಗಿ ಮೋರಿಗಳು ಉಕ್ಕಿ ರಸ್ತೆಯ ಮೇಲೆಲ್ಲ ನೀರು ತುಂಬಿದ ದೃಶ್ಯಗಳು ಬಹತೇಕ ಕಡೆಗಳಲ್ಲಿ ಕಂಡು ಬಂತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಬಹುತೇಕ ರಸ್ತೆಗಳು ಹೊಳೆಯಂತಾಗಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ