ಬಿಬಿಎಂಪಿ ನಿದ್ದೆಗೆಡಿಸಿದ ಹೊಂಗಸಂದ್ರ ಬಿಹಾರಿ ಬಾಂಬ್; ಕೊರೋನಾ ಭೀತಿಯಲ್ಲಿ ವೃದ್ದರು ಮಕ್ಕಳು

ಬೆಂಗಳೂರು ; ಹಾಟ್ಸ್ಪಾಟ್ಎಂದು ಗುರುತಿಸಲಾಗಿರುವ ಹೊಂಗಸಂದ್ರ ಇದೀಗ ಪಾಲಿಕೆಗೆ ತಲೆ ನೋವಾಗಿ ಪರಿಣಮಿಸಿದೆ. ವಾರ್ಡ್‌‌ನಲ್ಲಿ ಬಿಹಾರಿಗಳಿಂದ ಸೋಂಕು ಹರಡಿದ್ದು, ಈಗಾಗಲೇ 15 ಜನರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ಎಲ್ಲರನ್ನೂ ಚಿಕಿತ್ಸೆಗೆ ಒಳಪಡಿಸಲಾಗಿದೆ. ಆದರೆ, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ವೃದ್ಧರು ಮತ್ತು ಮಕ್ಕಳು ಅಧಿಕ ಸಂಖ್ಯೆಯಲ್ಲಿರುವುದು ಇದೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅದರಲ್ಲೂ ಪ್ರಮುಖವಾಗಿ ಕೊರೋನಾ ಸೋಂಕಿತ P419 ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಸುಮಾರು 185 ಜನ ಇದ್ದಾರೆ. ಈ ಪೈಕಿ ಮಕ್ಕಳು ಮತ್ತು ವೃದ್ಧರ ಸಂಖ್ಯೆ ಅಧಿಕವಾಗಿದ್ದು, ಈ ಪ್ರಾಥಮಿಕ ಸಂಪರ್ಕಿತರ ಪಟ್ಟಿಯಲ್ಲಿರುವ 20 ಮಂದಿ ಡೇಂಜರ್‌ ಜೋನ್‌ನಲ್ಲಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳಿಗೆ ಹಾಗೂ ವೃದ್ದರಿಗೆ ಸೋಂಕು ಶೀಘ್ರದಲ್ಲಿ ತಗುಲುವ ಆತಂಕ ಇದೆ. ಇದೇ ಕಾರಣಕ್ಕೆ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಮಕ್ಕಳು ಹಾಗೂ ವೃದ್ಧರ ಮೇಲೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಅಲ್ಲದೆ, ಇಂದಿರಾನಗರದಲ್ಲಿರುವ ಸಿವಿ ರಾಮನ್ ಆಸ್ಪತ್ರೆಯಲ್ಲಿ ಎಲ್ಲರನ್ನೂ ಕ್ವಾರಂಟೈನ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಹೊಂಗಸಂದ್ರದ ವಿದ್ಯಾಜ್ಯೋತಿ ಕಾಲೋನಿಯ ಎಲ್ಲ ಸಂಪರ್ಕ ರಸ್ತೆಗಳನ್ನೂ ಸೀಲ್​ಡೌನ್ ಮಾಡಲಾಗಿದೆ. ಇಲ್ಲಿನ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಅಲ್ಲದೆ, ಹೊಂಗಸಂದ್ರದ ವಿದ್ಯಾಜ್ಯೋತಿ ಕಾಲೋನಿಯ ಒಳಗಡೆ ಹೋಗುವವರನ್ನು ಪೊಲೀಸರು ತಡೆದು ವಾಪಾಸ್ ಕಳುಹಿಸುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ