ರಾಜ್ಯದಲ್ಲಿ 1 ವರ್ಷದ ಮಗು ಸೇರಿದಂತೆ 17 ಹೊಸ ಕೊರೋನಾ ಪ್ರಕರಣ ಪತ್ತೆ; 11 ಸಾವು, 277 ಜನರಿಗೆ ಸೋಂಕು

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊಸದಾಗಿ 17 ಜನರಿಗೆ ಕೊರೋನಾ ಸೋಂಕು ದೃಢಪಡುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ. ಈಗಾಗಲೇ 11 ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ವೈರಸ್​ನಿಂದ ಈಗಾಗಲೇ 11 ಜನ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಮತ್ತೆ 17 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಬ್ಬರು, ಬಾಗಲಕೋಟೆಯಲ್ಲಿ 2, ಮೈಸೂರಿನಲ್ಲಿ 10, ಕಲಬುರ್ಗಿಯಲ್ಲಿ 1, ವಿಜಯಪುರದಲ್ಲಿ 2 ಜನರಿಗೆ ಕೊರೋನಾ ವೈರಸ್​ ಇರುವುದು ಖಚಿತವಾಗಿದೆ.

ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 17 ಹೊಸ ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 277ಕ್ಕೆ ಏರಿದೆ. 75 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಕಷ್ಟದ ಸಮಯದಲ್ಲಿ ನಾಗರೀಕರು ಮನೆಯಲ್ಲಿಯೇ ಸುರಕ್ಷಿತವಾಗಿ ಇರಬೇಕೆಂದು ಕಳಕಳಿಯ ಮನವಿ ಮಾಡುತ್ತೇನೆ.

ಬಾಗಲಕೋಟೆಯ ಮುಧೋಳದಲ್ಲಿ ಮದರಸಾ ಡ್ಯೂಟಿಗೆ ನಿಯೋಜನೆಯಾಗಿದ್ದ 39 ವರ್ಷದ ಪೊಲೀಸ್​ಗೆ ಇಂದು ಕೊರೋನಾ ದೃಢಪಟ್ಟಿದೆ. ಹಾಗೇ, ಮೈಸೂರಿನಲ್ಲಿ ಪತ್ತೆಯಾಗಿರುವ 10 ಕೇಸುಗಳಲ್ಲಿ 9 ಜನರು ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದವರಾಗಿದ್ದಾರೆ. ಕಲಬುರ್ಗಿಯಲ್ಲಿ 1 ವರ್ಷದ ಮಗುವಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಉಳಿದವರಿಗೆ ಕುಟುಂಬದಲ್ಲಿದ್ದ ಸೋಂಕಿತರಿಂದ ಕೊರೋನಾ ವೈರಸ್​ ಹರಡಿದೆ.
ಒಟ್ಟು 277 ಸೋಂಕಿತರಲ್ಲಿ ಈಗಾಗಲೇ 75 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗಾಗಲೇ 11 ಜನರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತ ಜಿಲ್ಲೆಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇಂದು ಪತ್ತೆಯಾದ ಹೊಸ ಕೊರೋನಾ ಪ್ರಕರಣಗಳಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ