ಕೊರೋನಾ: ಭಾರತದಲ್ಲೇ ಉಳಿಯಲು ಬಯಸಿದ ಅಮೆರಿಕನ್ ಪ್ರಜೆಗಳು

ಹೊಸದಿಲ್ಲಿ: ಕೊರೋನಾ ವೈರಾಣು ಪಿಡುಗಿನ ಹಿನ್ನೆಲೆಯಲ್ಲಿ, ವಾರಾಂತ್ಯದ ವರೆಗೆ ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ 444 ಆಸ್ಟ್ರೇಲಿಯನ್ನರು ತಾಯಿನಾಡಿಗೆ ಹಿಂದಿರುಗಿದ್ದಾರೆ. ಆದರೆ ಕೋವಿಡ್-19 ವಿಶ್ವದ ಸಿರಿವಂತ ರಾಷ್ಟ್ರಗಳಲ್ಲೇ ವಿಪರೀತ ಹಾವಳಿಯನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಉಳಿದುಕೊಂಡ ಅಗಾಧ ಸಂಖ್ಯೆಯ ವಿದೇಶೀಯರು ವಿಶೇಷವಾಗಿ ಅಮೆರಿಕನರು ಸ್ವದೇಶಕ್ಕೆ ವಾಪಸು ತೆರಳಲು ನಿರಾಕರಿಸಿದ್ದಾರೆ.

ಸುಮಾರು 50,000ಕ್ಕಿಂತ ಅಧಿಕ ಸಂಖ್ಯೆಯ ಅಮೆರಿಕನರನ್ನು ವಿಶ್ವದ ವಿವಿಧೆಡೆಗಳಿಂದ ವಿಶೇಷ ವಿಮಾನಗಳಲ್ಲಿ ಸ್ವದೇಶಕ್ಕೆ ಕರೆ ತಂದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟಿಸಿದ್ದಾರೆ. ಸದ್ಯ ಅಮೆರಿಕದಲ್ಲಿ ಕೊರೋನಾ ಹಾವಳಿ ತಾರಕಕ್ಕೇರಿದ್ದರಿಂದ ಭಾರತದಲ್ಲಿರುವ ಅಮೆರಿಕನರು ಮಾತ್ರ ಸ್ವದೇಶಕ್ಕೆ ವಾಪಸಾಗಲು ನಿರಾಕರಿಸಿದ್ದಾರೆ. ಅಮೆರಿಕ ವಿದೇಶಾಂಗ ಇಲಾಖೆ ಭಾರತದಲ್ಲಿರುವ ಅಮೆರಿಕನರನ್ನು ವಾಪಸು ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದ್ದರೂ ಅವರು ಮಾತ್ರ ಸ್ವದೇಶಕ್ಕೆ ಹಿಂತಿರುಗದೆ ಭಾರತದಲ್ಲೇ ತಂಗುವುದಕ್ಕೆ ಇಷ್ಟಪಟ್ಟಿದ್ದಾರೆ. ಸುಮಾರು 24,000 ಅಮೆರಿಕನ್ನರು ಸದ್ಯ ಭಾರತದಲ್ಲೇ ಇರ ಬಯಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಅಕಾರಿ ಐಯನ್ ಬ್ರೌನ್‍ಲೀ ವಾಷಿಂಗ್ಟನ್ ಡಿಸಿಯಲ್ಲಿ ಹೇಳಿದ್ದಾರೆ.

ಕೋವಿಡ್-19 ಮಹಾಮಾರಿ ವಿರುದ್ಧ ವಿದೇಶೀಯರಿಗೆ ಶೀಘ್ರ ಸ್ಪಂದಿಸುವ ಹೊಣೆ ಹೊತ್ತ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ದಾಮು ರವಿ 20,473 ವಿದೇಶೀಯರನ್ನು ಭಾರತದಿಂದ ಅವರ ತಾಯಿನಾಡಿಗೆ ವಾಪಸಾಗಲು ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು. ಭಾರತದಲ್ಲಿರುವ 35,000 ಬ್ರಿಟಿಷ್ ಪ್ರಜೆಗಳಲ್ಲಿ ಸುಮಾರು 20,000 ಬ್ರಿಟಿಷಕರು ದೇಶಕ್ಕೆ ಮರಳಲು ಇಚ್ಛಿಸಿದ್ದಾಗಿ ಯುಕೆ ಕಾಮನ್ವೆಲ್ತ್ ಸಚಿವ ತಾರಿಖ್ ಅಹ್ಮದ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ