ಕೋವಿಡ್-19:ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ,ಲಾಕ್ ಡೌನ್ ವಿಸ್ತರಣೆ ನಿಟ್ಟಿನಲ್ಲಿ ಚರ್ಚೆ

ನವದೆಹಲಿ: ಕೋವಿಡ್-19 ವಿರುದ್ಧ ದೇಶ ಹೋರಾಡುತ್ತಿರುವಂತೆ 21 ದಿನಗಳ ಕಾಲ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ವಿಸ್ತರಣೆಯಾಗಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸುವ ಮೂಲಕ ಪ್ರತಿಕ್ರಿಯೆ ಪಡೆದುಕೊಂಡರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ , ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ , ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಂವಾದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಮುಖ್ಯಮಂತ್ರಿಗಳು ಮುಖಕ್ಕೆ ಮಾಸ್ಕ್ ಧರಿಸಿರುವುದು ಕಂಡುಬಂದಿತು.

ಪ್ರಸ್ತುತ ಜಾರಿಯಲ್ಲಿರುವ 21 ದಿನಗಳ ಲಾಕ್ ಡೌನ್ ಏಪ್ರಿಲ್ 14 ರಂದು ಅಂತ್ಯವಾಗಲಿದ್ದು, ಪಂಜಾಬ್ ಹಾಗೂ ಒಡಿಶಾ ರಾಜ್ಯಗಳು ಲಾಕ್ ಡೌನ್ ಅವಧಿಯನ್ನು ಈಗಾಗಲೇ ವಿಸ್ತರಿಸಿವೆ. ಕೇಂದ್ರ ಸರ್ಕಾರ ಕೂಡಾ ಕೆಲ ವಿನಾಯಿತಿಯೊಂದಿಗೆ ಲಾಕ್ ಡೌನ್ ವಿಸ್ತರಿಸುವ ಸಾಧ್ಯತೆ ಇದೆ

ಪ್ರಸ್ತುತವಿರುವ ಲಾಕ್‌ಡೌನ್‌ನಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಸೇವೆಗಳು ಮತ್ತು ಹೆಚ್ಚಿನ ವರ್ಗದ ಜನರಿಗೂ ವಿನಾಯಿತಿ ನೀಡಬೇಕೆ ಎಂಬ ಬಗ್ಗೆ ರಾಜ್ಯಸರ್ಕಾರಗಳ ಅಭಿಪ್ರಾಯಗಳನ್ನು ಕೇಂದ್ರ ಗೃಹ ಸಚಿವಾಲಯ ಕೋರಿದೆ.

ಲಾಕ್ ಡೌನ್ ಜಾರಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸುತ್ತಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ