ದೇಶದಲ್ಲಿ 239ಕ್ಕೆ ಏರಿದ ಕೊರೋನಾ ಸಾವು; ಕಳೆದ 24 ಗಂಟೆಯಲ್ಲಿ 896 ಹೊಸ ಪ್ರಕರಣ

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ 239 ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 6,761 ಕ್ಕೆ ಏರಿದೆ.

ಗುರುವಾರ ಸಂಜೆ ನಂತರದ 24 ಗಂಟೆಗಳಲ್ಲಿ ಸುಮಾರು 896 ಹೊಸ ಪ್ರಕರಣಗಳು ಕಂಡುಬಂದಿವೆ. ಅಲ್ಲದೆ, ಪೈಕಿ 37 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಗುರುವಾರ ಸಂಜೆಯಿಂದ 37 ಸಾವುಗಳು ವರದಿಯಾಗಿದ್ದು, ಅದರಲ್ಲಿ ಮಹಾರಾಷ್ಟ್ರ 25, ದೆಹಲಿಯಲ್ಲಿ 4, ಪಂಜಾಬ್‌ನಲ್ಲಿ 3, ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ತಲಾ 1 ಸಾವು ಸಂಭವಿಸಿದೆ.

ಒಟ್ಟು 206 ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸಾವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ 97 ಜನ ಮೃತಪಟ್ಟಿದ್ದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ 17, ಮಧ್ಯಪ್ರದೇಶದಲ್ಲಿ 16, ದೆಹಲಿ 13 ಮತ್ತು ಪಂಜಾಬ್‌ನಲ್ಲಿ 11 ಜನ ಮೃತಪಟ್ಟಿದ್ದು ಈ ಎಲ್ಲಾ ರಾಜ್ಯಗಳು ಕ್ರಮವಾಗಿ ನಂತರದ ಸ್ಥಾನ ಪಡೆದಿವೆ. ಇದಲ್ಲದೆ, ದಕ್ಷಿಣ ರಾಜ್ಯಗಳಾದ ತಮಿಳುನಾಡಿನಲ್ಲಿ 8 ಮತ್ತು ತೆಲಂಗಾಣದಲ್ಲಿ 7 ಸಾವುಗಳು ದಾಖಲಾಗಿವೆ.

ಆಂಧ್ರಪ್ರದೇಶ ಮತ್ತು ಕರ್ನಾಟಕವು ತಲಾ 6 ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ.  ಪಶ್ಚಿಮ ಬಂಗಾಳದಲ್ಲಿ 5, ಜಮ್ಮು- ಕಾಶ್ಮೀರ, ಉತ್ತರ ಪ್ರದೇಶಗಳಲ್ಲಿ ತಲಾ 4, ಹರಿಯಾಣ ಮತ್ತು ರಾಜಸ್ಥಾನಗಳು ತಲಾ 3 ಸಾವುಗಳು ದಾಖಲಾಗಿವೆ. ಇದಲ್ಲದೆ, ಕೇರಳ ರಾಜ್ಯದಲ್ಲೂ ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಶುಕ್ರವಾರ ಸಂಜೆ ನವೀಕರಿಸಿದ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ.

ಈ ಒಂದೇ ರಾಜ್ಯದಲ್ಲಿ ಸುಮಾರು 1,364 ಜನರಿಗೆ ಕೊರೋನಾ ಸೋಂಕು ಹರಡಿದೆ.  898 ಸೋಂಕಿತರನ್ನು ಹೊಂದಿರುವ ದೆಹಲಿ ಮತ್ತು 834 ಸೋಂಕಿತರನ್ನು ಹೊಂದಿರುವ ತಮಿಳುನಾಡು ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಹೀಗಾಗಿ ದೇಶದಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ