ಕೇಂದ್ರದಿಂದ ೧೫ ಸಾವಿರ ಕೋಟಿ ರೂ. ಆರೋಗ್ಯ ಪ್ಯಾಕೇಜ್

ಹೊಸದಿಲ್ಲಿ: ದೇಶಾದ್ಯಂತ ಕೊರೋನಾ ಭೀತಿ ಉಂಟುಮಾಡಿರುವ ಬೆನ್ನಲ್ಲೇ ಜನರಿಗೆ ಆರೋಗ್ಯ ಭದ್ರತೆ ಒದಗಿಸುವ ದಿಸೆಯಲ್ಲಿ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನವಿರುವ ೧೫ ಸಾವಿರ ಕೋಟಿ ರೂ. ತುರ್ತು ಪ್ಯಾಕೇಜ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಆರೋಗ್ಯ ಪ್ಯಾಕೇಜ್‌ಗೆ ಭಾರತ ಕೋವಿಡ್-೧೯ ತುರ್ತು ಪ್ರತಿಕ್ರಿಯೆ ಹಾಗೂ ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್ ಎಂದು ಹೆಸರು ಸೂಚಿಸಲಾಗಿದ್ದು, ೨೦೨೪ರವರೆಗೆ ಆರೋಗ್ಯ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ವಂದನಾ ಗುರ್ನಾನಿ ಸಹಿ ಇರುವ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆ ಸ್ಥಿರ, ಮುಂಜಾಗ್ರತಾ ಕ್ರಮ, ವೈದ್ಯಕೀಯ ಸಲಕರಣೆ ಸಂಗ್ರಹ, ಲ್ಯಾಬೊರೇಟರಿಗಳ ಅಳವಡಿಕೆ, ಜೀವ ರಕ್ಷಕ ಸಾಧನ ಖರೀದಿ ಸೇರಿ ಹಲವು ಸಲಕರಣೆ ಖರೀದಿಗೆ ಹಣ ಬಳಸಲಾಗುತ್ತದೆ. ಇದರ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸಲಿದೆ.

ಮೂರು ಹಂತಗಳಲ್ಲಿ ಪ್ಯಾಕೇಜ್ ನಿ ಬಳಸಲಾಗುತ್ತಿದ್ದು, ಮೊದಲ ಹಂತದಲ್ಲಿ ಆಸ್ಪತ್ರೆ ನಿರ್ಮಾಣ, ಐಸೋಲೇಷನ್ ವಾರ್ಡ್ ನಿರ್ಮಾಣ, ವೆಂಟಿಲೇಟರ್ ಅಳವಡಿಕೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ), ಎನ್-೯೫ ಮಾಸ್ಕ್ ಹಾಗೂ ಮೂರನೇ ಹಂತದಲ್ಲಿ ಲ್ಯಾಬೋರೇಟರಿಗಳ ನಿರ್ಮಾಣ ಮಾಡಲಾಗುತ್ತದೆ.

ಉದ್ದೇಶವೇನು?

ಭಾರತದಲ್ಲಿ ಈಗಾಗಲೇ ಕೊರೋನಾ ವೈರಸ್ ಭಾರಿ ಪರಿಣಾಮ ಬೀರುತ್ತದೆ. ಅಲ್ಲದೆ, ಮಂಗನ ಕಾಯಿಲೆ, ಮಲೇರಿಯಾ, ಹಂದಿ ಜ್ವರ ಸೇರಿ ಹಲವು ಸಾಂಕ್ರಾಮಿಕ ರೋಗಗಳು ಆಗಾಗ ಜನರ ಸಾವಿಗೆ ಕಾರಣವಾಗುತ್ತಲೇ ಇವೆ. ಇಂತಹ ರೋಗಗಳ ನಿಯಂತ್ರಣ, ಜನರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರವು ತುರ್ತು ಪ್ಯಾಕೇಜ್ ಘೋಷಿಸಿದೆ.

ಲಕ್ಷ ಕೋಟಿ ರೂ. ಪ್ಯಾಕೇಜ್ ಶೀಘ್ರ:

ಕೊರೋನಾ ವೈರಸ್ ಹಿನ್ನೆಲೆ ಕಳೆದ ತಿಂಗಳು ಕೇಂದ್ರ ಸರ್ಕಾರ ಬಡವರು, ಉದ್ಯೋಗಿಗಳು, ಕಂಪನಿಗಳು ಸೇರಿ ಹಲವರಿಗೆ ಅನುಕೂಲವಾಗಲು ೧.೭ ಲಕ್ಷ ಕೋಟಿ ರೂ. ಮೌಲ್ಯದ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ, ಈಗ ಕೇಂದ್ರ ಸರ್ಕಾರವು ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಶೀಘ್ರದಲ್ಲೇ ೧ ಲಕ್ಷ ಕೋಟಿ ರೂ. ಮೌಲ್ಯದ ಮತ್ತೊಂದು ಪ್ಯಾಕೇಜ್ ಘೋಷಿಸಲು ಸಜ್ಜಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ