ಕೋವಿಡ್-19 ಅಟ್ಟಹಾಸಕ್ಕೆ ಬಲಿಯಾದ ಸಂಖ್ಯೆ 117ಕ್ಕೇರಿದ್ದು, ಸೋಂಕಿತರ ಸಂಖ್ಯೆ 4,300ರ ಸನಿಹದಲ್ಲಿದೆ

ನವದೆಹಲಿ/ಮುಂಬೈ,ಏ.3-ಕಿಲ್ಲರ್ ಕೊರೊನಾ ರಣಕೇಕೆ ದೇಶದಾದ್ಯಂತ ಮಾರ್ದನಿಸುತ್ತಿದ್ದು, ಅನೇಕ ರಾಜ್ಯಗಳು ಮಾರಕ ಸೋಂಕಿನ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ದೇಶದಲ್ಲಿ ಈವರೆಗೆ ಕೋವಿಡ್-19 ಅಟ್ಟಹಾಸಕ್ಕೆ ಬಲಿಯಾದ ಸಂಖ್ಯೆ 117ಕ್ಕೇರಿದ್ದು, ಸೋಂಕಿತರ ಸಂಖ್ಯೆ 4,300ರ ಸನಿಹದಲ್ಲಿದೆ.

ನಿನ್ನೆ ದೇಶಾದ್ಯಂತ ಅತಿಹೆಚ್ಚು ಅಂದರೆ 27 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಹೊಸ ಹೊಸ ಸೋಂಕು ಪ್ರಕರಣಗಳು ಮರುಕಳಿಸುತ್ತಲೇ ಇವೆ.

ಕೊರೊನಾ ಪೀಡೆಯ ನಿರ್ಮೂಲನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕಠಿಣ ಸಂಘಟಿತ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಈ ವೈರಾಣು ದಾಳಿಗೆ ಅಂಕುಶ ಹಾಕಲು ಸಾಧ್ಯವಾಗಿಲ್ಲ. ಈ ಪೀಡೆಯ ಯಮಪಾಶ ಮುಂದುವರಿದಿದ್ದು, ಸಾವು ಮತ್ತು ಸೋಂಕು ಪ್ರಕರಣಗಳು ಇಂದೂ ಕೂಡ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ಕಳೆದ 12 ತಾಸುಗಳ ಅವಧಿಯಲ್ಲಿ ರಾಜ್ಯಗಳಲ್ಲಿ ಆರು ಸಾವುಗಳು ಸಂಭವಿಸಿವೆ. ಆಂಧ್ರಪ್ರದೇಶ ಮತ್ತು ರಾಜಸ್ತಾನದಲ್ಲಿ ತಲಾ ಇಬ್ಬರು ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಸೋಂಕು ಪೀಡಿತರು ಸಾವಿಗೀಡಾಗಿದ್ದಾರೆ.

ಈ ಮಧ್ಯೆ ಗುಜರಾತ್‍ನ ವಡೋದರಾದಲ್ಲಿಂದು ಬೆಳಗ್ಗೆ 62 ವರ್ಷದ ಮಹಿಳೆ ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟು 12 ಮಂದಿ ಸಾವಿಗೀಡಾಗಿದ್ದಾರೆ.

ಗಾಂಧಿನಾಡು ಗುಜರಾತ್‍ನಲ್ಲಿ ಮತ್ತೆ 16 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಬಾಧಿತರ ಸಂಖ್ಯೆ 144ಕ್ಕೇರಿದೆ. ನಿನ್ನೆ ಸೂರತ್‍ನಲ್ಲಿ 61 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದ ಅಸುನೀಗಿದ್ದು, ರಾಜ್ಯದಲ್ಲಿ ಈವರೆಗೆ 11 ಮಂದಿ ಸತ್ತಿದ್ದಾರೆ. ನಿನ್ನೆ 14 ಪ್ರಕರಣಗಳು ದೃಢಪಟ್ಟಿತ್ತು.

ಸಾವು ಮತ್ತು ಬಾಧಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ತಮಿಳುನಾಡು, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ