ಕೊರೊನಾ ವೈರಾಣುವಿನ ವಕ್ರದೃಷ್ಟಿ ಈಗ ವನ್ಯಜೀವಿಗಳ ಮೇಲೂ ಬೀರಿದೆ

ನ್ಯೂಯಾರ್ಕ್, ಏ.6- ಇಡೀ ವಿಶ್ವವನ್ನೇ ಭಯಭೀತಗೊಳಿಸಿರುವ ಮಾರಕ ಕೊರೊನಾ ವೈರಾಣುವಿನ ವಕ್ರದೃಷ್ಟಿ ಈಗ ವನ್ಯಜೀವಿಗಳ ಮೇಲೂ ಬಿದ್ದಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

ನ್ಯೂಯಾರ್ಕ್ ನಗರದ ಮೃಗಾಲಯದಲ್ಲಿ ಹುಲಿ ಮತ್ತು ಸಿಂಹಗಳಿಗೂ ಈ ಸೋಂಕು ಕಾಣಿಸಿಕೊಂಡಿರುವುದು ಕಳವಳಕ್ಕೆ ಎಡೆ ಮಾಡಿಕೊಟ್ಟಿದೆ.

ಆ ಮೂಲಕ ಅಮೆರಿಕದಲ್ಲಿ ವೈರಸ್ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಾಣಿಗಳಲ್ಲಿ ಸೋಂಕು ಗೋಚರಿಸಿದೆ. ನ್ಯೂಯಾರ್ಕ್‍ನ ಬ್ರಾಂಕ್ಸ್ ಮೃಗಾಲಯದಲ್ಲಿರುವ ಒಂದು ಹಿಮಾಲಯನ್ ಹುಲಿಗೆ (4) ಸೋಂಕು ತಗುಲಿದ್ದು, ಇತ್ತೀಚೆಗೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಇದು ದೃಢವಾಗಿದೆ.

ಈ ಹುಲಿ ಜತೆಗಿದ್ದ ಇತರೆ 6 ವ್ಯಾಘ್ರಗಳು ಮತ್ತು ಸಿಂಹಗಳು ಅನಾರೋಗ್ಯದಿಂದ ನರಳುತ್ತಿವೆ.

ವಿಶ್ವದಲ್ಲಿ ವನ್ಯಜೀವಿಗಳಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ಮೊದಲ ಪ್ರಕರಣ ಇದಾಗಿದ್ದು, ಪ್ರಾಣಿಗಳಲ್ಲೂ ಮಹಾಮಾರಿಯ ಸೋಂಕು ಹಬ್ಬುವ ಆತಂಕವಿದೆ.

ಮಾ.27ರಂದು ಹುಲಿ ತೀವ್ರ ಜ್ವರಕ್ಕೆ ತುತ್ತಾಗಿತ್ತು. ಅಲ್ಲದೆ ವೈರಸ್ ಸಂಬಂಧಿತ ಲಕ್ಷಣಗಳೂ ಗೋಚರವಾಗುತ್ತಿತ್ತು. ಇದೇ ಕಾರಣಕ್ಕೆ ಹುಲಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿತ್ತು. ಹುಲಿಯಲ್ಲಿ ಸೋಂಕು ದೃಢಪಟ್ಟಿದ್ದು, ಇತರೆ ಹುಲಿಗಳಿಗೂ ಈ ಸೋಂಕು ತಗುಲಿರುವ ಶಂಕೆ ಇದೆ. ಹೀಗಾಗಿ ಎಲ್ಲಾ ಪ್ರಾಣಿಗಳನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಇತರೆ ವ್ಯಾಘ್ರಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ.

ನ್ಯೂಯಾರ್ಕ್‍ನ ಮೃಗಾಲಯದ ಸಿಬ್ಬಂದಿಗೆ ಸೋಂಕು ತಗುಲಿದ್ದು, ಅವರ ಮೂಲಕ ಪ್ರಾಣಿಗಳಿಗೆ ವೈರಸ್ ಹರಡಿರಬಹುದೆಂಬ ಶಂಕೆ ಇದ್ದು , ಈ ಬಗ್ಗೆ ತನಿಖೆ ಮುಂದುವರೆಯುತ್ತಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ದಿನಗಳ ಹಿಂದೆಯೇ ನ್ಯೂಯಾರ್ಕ್ ಮೃಗಾಲಯವನ್ನು ಬಂದ್ ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ