ನಕಲಿ ಸ್ಯಾನಿಟೈಜರ್ ತಯಾರು ಮಾಡುವವರಿಗೆ ಅಪಾಯಕಾರಿ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಯ ಬಂಧನ

ಬೆಂಗಳೂರು,ಏ.6- ನಕಲಿ ಸ್ಯಾನಿಟೈಜರ್ ತಯಾರು ಮಾಡುವವರಿಗೆ ಅಪಾಯಕಾರಿ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಬಡಾವಣೆ, 2ನೆ ಹಂತದ ನಿವಾಸಿ ರೇಣುಕ ಪ್ರಸಾದ್ (53) ಬಂಧಿತ ಆರೋಪಿ.

ಈತ ವಿಲ್ಸನ್ ಗಾರ್ಡನ್ ಠಾಣೆ ವ್ಯಾಪ್ತಿಯ ಸುಧಾಮನಗರದಲ್ಲಿ ಯಾವುದೇ ಪರವಾನಗಿ ಪಡೆಯದೆ ಅಪಾಯಕಾರಿ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ.

ಕೊರೊನಾ ವೈರಸ್ ನಿರ್ಮೂಲನೆಗೆ ಬಳಕೆ ಮಾಡುತ್ತಿರುವ ನಕಲಿ ಸ್ಯಾನಿಟೈಜರ್ ತಯಾರು ಮಾಡುವವರಿಗೆ ಅಕ್ರಮವಾಗಿ ರಾಸಾಯನಿಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎಂಬ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿಯ ಸಂಘಟಿತ ಅಪರಾಧ ದಳದ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.

ಬಂಧಿತನಿಂದ 400 ಲೀಟರ್ ಐಸೋ ಪ್ರೊಫೈಲ್ ಆಲ್ಕೋಹಾಲ್, 210 ಲೀಟರ್ ಟಾಲಿನ್, 100 ಲೀಟರ್ ಟರ್ಪಂಟೈನ್, 600 ಲೀಟರ್ ಅಸಿಟೋನ್, 50 ಲೀಟರ್ ಬೆಂಜಾಯಲ್ ಆಲ್ಕೋಹಾಲ್ ಹಾಗೂ ಸ್ಫೋಟಕ ರಾಸಾಯನಿಕಗಳಾದ ನೈಟ್ರೋ ಬೆಂಜಿನ್, ಸಿಲಿಕಾನ್ ಆಯಿಲ್, ಲಿಕ್ವಿಡ್ ಪ್ಯಾರಾಫೀನ್, ಗ್ಲಿಜರಿನ್, ಮಿಥಿಲಿನ್ ಕ್ಲೋರೈಡ್, ಕ್ಯಾಸ್ಟ್ರಾಕ್ಸ್, ಪ್ರೊಪಿಲಿನ್ ಗ್ಲೈಕಾಲ್, ಪಾಲಿ ಎಥಿಲಿನ್ ಗ್ಲೈಕಾನ್ ಇನ್ನೂ ಮುಂತಾದ ಸಾವಿರಾರು ಲೀಟರ್‍ಗಳಷ್ಟು ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪೆಟ್ರೋಲಿಯಂ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ