ಲಾಕ್‍ಡೌನ್ ಇದ್ದರೂ ಅನಗತ್ಯವಾಗಿ ರಸ್ತೆಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳ ಕೀಗಳನ್ನು ಕಿತ್ತುಕೊಂಡು ಎಚ್ಚರಿಕೆ ನೀಡಿದ್ದಾರೆ

ತುಮಕೂರು, ಏ.6- ಲಾಕ್‍ಡೌನ್ ಇದ್ದರೂ ಅನಗತ್ಯವಾಗಿ ರಸ್ತೆಗೆ ಬಂದವರನ್ನು ವಾಪಸ್ ಹೋಗುವಂತೆ ಹೇಳಿದರೂ ಕೇಳದ ಕಾರಣ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳ ಕೀಗಳನ್ನು ಕಿತ್ತುಕೊಂಡು ಎಚ್ಚರಿಕೆ ನೀಡಿದ್ದಾರೆ.

ವಾಹನವಿದ್ದರೆ ತಾನೆ ಜನ ರಸ್ತೆಗೆ ಬರುವುದು ಎಂದು ಪೊಲೀಸರು, ವಾಹನಗಳನ್ನೇ ಜಪ್ತಿ ಮಾಡಿ ಪರಿಸ್ಥಿತಿ ನಿಯಂತ್ರಿಸುವ ಕ್ರಮ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ ಪೊಲೀಸರು ಇಂತಹ ನೂರಾರು ವಾಹನಗಳನ್ನು ಈಗಾಗಲೇ ಜಪ್ತಿ ಮಾಡಿ ತಮ್ಮ ವಶಕ್ಕೆ ಪಡೆದಿದ್ದಾರೆ. ಲಾಕ್‍ಡೌನ್ ಮುಗಿಯುವವರೆಗೂ ವಾಹನಗಳು ಪೊಲೀಸರ ವಶದಲ್ಲಿರುತ್ತವೆ. ಇಂತಹ ಕಠಿಣ ಕ್ರಮದಿಂದ ಒಂದಷ್ಟು ಜನರ ನಿಯಂತ್ರಣ ಸಾಧ್ಯವಾಗಿದೆ. ಆದರೂ ಇನ್ನೂ ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಖಾಲಿ ರಸ್ತೆಗೆ ವಾಹನ ತಂದು ವೀಲಿಂಗ್ ಮಾಡಿ ಉದ್ದಟತನ ತೋರುತ್ತಿದ್ದಾರೆ. ಅಂತಹವರು ಕಣ್ಣಿಗೆ ಬಿದ್ದರೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ವಾಹನ ಜಪ್ತಿ ಮಾಡುತ್ತಿದ್ದಾರೆ.

ನಗರದ ಅನೇಕ ರಸ್ತೆಗಳಲ್ಲಿ ಚೆಕ್ ಪಾಯಿಂಟ್ ಮಾಡಿಕೊಂಡು ಪೊಲೀಸರು ಕಾವಲು ಕಾಯುತ್ತಿದ್ದಾರೆ. ಕೆಲವು ಕಡೆ ಅನಗತ್ಯ ಓಡಾಟಕ್ಕೆ ಕಡಿವಾಣ ಬಿದ್ದಿದೆ.

ಒಂದಷ್ಟು ಕಡೆ ಪೊಲೀಸರ ಎಚ್ಚರಿಕೆಗೂ ಜನ ಜಗ್ಗುತ್ತಿಲ್ಲ ಅಂತಹವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಅಗತ್ಯವಾಗಿದೆ ಎಂದು ಪೊಲೀಸರು ಅಭಿಪ್ರಾಯ ಪಡುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ