ದೆಹಲಿಯ ಧಾರ್ಮಿಕ ಸಭೆಯಲ್ಲಿ ಇಬ್ಬರು ಯೋಧರು

ಮಂಡ್ಯ: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಭಾರತೀಯ ಸೇನಾಪಡೆಯ ಇಬ್ಬರು ಯೋಧರು ಪಾಲ್ಗೊಂಡಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಈ ಸಂಗತಿಯನ್ನು ಜಿಲ್ಲಾ ಪೋಲೀಸ್ ಆರಕ್ಷಕ ಕೆ.ಪರಶುರಾಮ ಬಹಿರಂಗಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕರ್ನಾಟಕದಿಂದ ಪಾಲ್ಗೊಂಡಿದ್ದವರ ಬಗ್ಗೆ ಸರ್ಕಾರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮಂಡ್ಯ ಜಿಲ್ಲೆಯ ಎಂಟು ಮಂದಿ ಇದ್ದಾರೆ. ಅದರಲ್ಲಿ ಇಬ್ಬರು ಬಿಎಸ್‍ಎಫ್ ಯೂನಿಟ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಇಬ್ಬರಲ್ಲಿ ಒಬ್ಬರ ಇರುವಿಕೆ ಮಾತ್ರ ಗೊತ್ತಾಗಿದೆ. ಅವರು ಸ್ಥಳೀಯ ವಿಳಾಸದಲ್ಲಿ ಇಲ್ಲ. ಅವರ ಪೋನ್ ಕರೆಯನ್ನು ಯಾರೂ ಸ್ವೀಕರಿಸುತ್ತಿಲ್ಲ. ಅವರ ಪೋನ್ ನಂಬರ್ ಮಾ.23ರಿಂದಲೂ ಸ್ವಿಚ್‍ಆಫ್ ಆಗಿದ್ದು, ಮೊಬೈಲ್ ಇರುವಿಕೆ ಸ್ಥಳ ಉತ್ತರ ಪ್ರದೇಶದ ಗಾಜಿಯಾಬಾದ್ ಎಂದು ತೋರಿಸುತ್ತಿದೆ ಎಂದು ಮಾಹಿತಿ ನೀಡಿದರು.

ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವವರ ಪೈಕಿ ಇಬ್ಬರು ಭದ್ರಾವತಿಯಲ್ಲಿ ವಾಸವಿದ್ದು, ಇನ್ನೊಬ್ಬರು ಬೆಂಗಳೂರಿನಲ್ಲಿದ್ದಾರೆ. ಅವರ ಬಗ್ಗೆ ನಿಗಾ ವಹಿಸುವಂತೆ ಆ ಜಿಲ್ಲೆಗೆ ಮಾಹಿತಿ ರವಾನಿಸಲಾಗಿದೆ ಎಂದು ಹೇಳಿದರು.

ಇನ್ನುಳಿದಂತೆ ನಾಗಮಂಗಲ ತಾಲೂಕಿನ ನೂರುಲ್ಲಾ ಎಂಬಾತ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದು, ಆತ ಸೇರಿದಂತೆ ಕುಟುಂಬದ ಆರು ಮಂದಿಯನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ. ಇದಲ್ಲದೆ ಜಿಲ್ಲೆಯ ಉಳಿದ ಸಾರ್ವಜನಿಕ ಜಮಾತ್‍ಗಳಲ್ಲಿ ಗುಜರಾತ್ ರಾಜ್ಯದ 54 ಧಾರ್ಮಿಕ ಬೋಧನೆ ಮಾಡುವ ಜನರಿದ್ದಾರೆ. ಅವರು ಆಗಲೇ ಜಿಲ್ಲೆಯಲ್ಲಿ 25 ದಿನ ಕಳೆದಿದ್ದಾರೆ. ಅವರ ಆರೋಗ್ಯ ತಪಾಸಣೆಯನ್ನೂ ಆರೋಗ್ಯಾಕಾರಿಗಳಿಂದ ನಡೆಸಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಆದರೂ ಅವರನ್ನು ಮಸೀದಿಯ ಹೋಂಕ್ವಾರಂಟೈನ್‍ನಲ್ಲಿಡಲಾಗಿದೆ ಎಂದರು.

ಇವರಲ್ಲದೆ ಬೆಂಗಳೂರು ಹಾಗೂ ಗದಗ್ ಜಿಲ್ಲೆಯ 24 ಜನರು ಇಲ್ಲಿದ್ದಾರೆ. ಅವರೂ ಸಹ 20 ದಿನಗಳನ್ನು ಕಳೆದಿದ್ದಾರೆ. ಅವರ ಆರೋಗ್ಯದಲ್ಲೂ ಏರು-ಪೇರು ಕಂಡುಬಂದಿಲ್ಲ. ಆದರೂ ಹೋಂ ಕ್ವಾರಂಟೈನ್‍ನಲ್ಲಿ ಇಟ್ಟಿದ್ದೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ