ಮುಂದುವರೆದ ಕೊರೋನಾ ಆರ್ಭಟ; 1,637 ಮಂದಿಗೆ ಸೋಂಕು, ಸಾವಿನ ಸಂಖ್ಯೆ38ಕ್ಕೆ

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಎಂದಿನಂತೆಯೇ ಮುಂದುವರೆದಿದೆ. ಇಂದು ಮಹಾರಾಷ್ಟ್ರದಲ್ಲಿ ಮತ್ತೋರ್ವ ವ್ಯಕ್ತಿ ಸೋಂಕಿಗೆ ಬಲಿಯಾದ ಕಾರಣ ಮೃತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಸುಮಾರು 242 ಮಂದಿಗೆ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಕೊರೋನಾ ಪೀಡಿತರ ಸಂಖ್ಯೆ 1,637ಕ್ಕೆ ಏರಿಕೆಯಾಗಿದೆ. ಈ ಪೈಕಿ 133 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಚೀನಾದಲ್ಲಿ ಕಾಣಿಸಿಕೊಂಡ ಈ ಮಾರಕ ಕೊರೋನಾ ದೇಶದ ವಿವಿಧ ಭಾಗಗಳಲ್ಲಿ 38 ಮಂದಿಯನ್ನು ಬಲಿಪಡೆದುಕೊಂಡಿದೆ. ಪಶ್ಚಿಮಬಂಗಾಳ, ಪಂಜಾಬ್ ಹಾಗೂ ಕೇರಳ ರಾಜ್ಯದಲ್ಲಿ ತಲಾ ಒಬ್ಬರು ಮಂಗಳವಾರ ಮೃತಪಟ್ಟಿದ್ದರು. ಈ ಬೆನ್ನಲ್ಲೀಗ ಮಹಾರಾಷ್ಟ್ರದಲ್ಲಿ ಮತ್ತೋರ್ವ ಸಾವನ್ನಪ್ಪಿದ್ದಾರೆ.

ಇಡೀ ಜಗತ್ತಿನಲ್ಲಿ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್​ ಬಹುತೇಕ ಎಲ್ಲ ದೇಶಗಳಿಗೂ ಪ್ರವೇಶಿಸಿದೆ. ಚೀನಾದ ವುಹಾನ್​ನಿಂದ ಆರಂಭವಾದ ಕೊರೋನಾ ಅಟ್ಟಹಾಸ ಇದೀಗ ವಿಶ್ವವನ್ನೇ ಆವರಿಸಿದೆ. ಇಟಲಿ, ಸ್ಪೇನ್, ಜರ್ಮನಿ, ಅಮೆರಿಕ, ಇರಾನ್​ ದೇಶಗಳಲ್ಲಿ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಈ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಸದ್ಯಕ್ಕೆ ಭಾರತ ಸೋಂಕಿತ ದೇಶಗಳ ಪೈಕಿ 40ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿರುವುದರಿಂದ ಏಪ್ರಿಲ್ ಅಂತ್ಯದ ವೇಳೆಗೆ ಭಾರತದಲ್ಲಿ ಸಂಪೂರ್ಣವಾಗಿ ಕೊರೋನಾ ಸೋಂಕಿನ ಪ್ರಮಾಣ ಹತೋಟಿಗೆ ಬರಬಹುದು ಎಂಬ ನಿರೀಕ್ಷೆಯಿದೆ.

ವಿಶ್ವಾದ್ಯಂತ ಕೊರೋನಾ ವೈರಸ್​ಗೆ 42,151 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ 8,58,669 ಕೊರೋನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಅವರಲ್ಲಿ 1,78,099 ಜನರು ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು, ಗುಣಮುಖರಾಗಿದ್ದಾರೆ. ಸದ್ಯಕ್ಕೆ ಜಗತ್ತಿನಲ್ಲಿ 6,38,419 ಜನ ಕೊರೋನಾ ವೈರಸ್​​ನಿಂದ ಬಳಲುತ್ತಿದ್ದಾರೆ. ಅವರಲ್ಲಿ 32,898 ಜನರು ಈ ಸೋಂಕಿನಿಂದ ಗುಣಮುಖರಾಗದ ಪರಿಸ್ಥಿತಿಯಲ್ಲಿದ್ದಾರೆ.

ಭಾರತದಲ್ಲಿ 1,637ಕೊರೋನಾ ಸೋಂಕಿತ ಪ್ರಕರಣಗಳಿವೆ. ಅವರಲ್ಲಿ 133 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಮೂಲಕ ಭಾರತ ಕೊರೋನಾ ಸೋಂಕಿತ ದೇಶಗಳ ಪೈಕಿ 40ನೇ ಸ್ಥಾನದಲ್ಲಿದೆ. ಭಾರತದಲ್ಲಿ ಲಾಕ್​ಡೌನ್​ನಿಂದಾಗಿ ಕೊರೋನಾ ಸೋಂಕಿತರ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 10 ಜನ ಕೊರೋನಾದಿಂದ ಸಾವನ್ನಪ್ಪುವ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಭೀತಿ ಶುರುವಾಗಿದೆ. 4 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಿಂದ ದೇಶಾದ್ಯಂತ ಕೊರೋನಾ ಹರಡುವ ಆತಂಕ ಎದುರಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ