ಇಟಲಿಯಲ್ಲಿ ಕೊರೋನಾಗೆ ಒಂದೇ ದಿನ 969 ಬಲಿ!; ಸಾವಿನ ಸಂಖ್ಯೆ 9,134ಕ್ಕೆ ಏರಿಕೆ, 86,500 ಜನರಿಗೆ ಸೋಂಕು

ನವದೆಹಲಿ: ಕೊರೋನಾ ವೈರಸ್​ ಚೀನಾದಿಂದ ಆರಂಭಗೊಂಡು ಒಂದೊಂದಾಗಿ ವಿಶ್ವದ ಎಲ್ಲ ದೇಶಗಳನ್ನೂ ಆವರಿಸಿಕೊಳ್ಳುತ್ತಿದೆ. ಆರಂಭದಲ್ಲಿ ಚೀನಾದಲ್ಲಿ ಕೊರೋನಾ ತೀವ್ರತೆ ಹೆಚ್ಚಾಗಿ, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಇಟಲಿ ದೇಶ ಎಚ್ಚೆತ್ತುಕೊಂಡಿರಲಿಲ್ಲ. ಅದರ ಪರಿಣಾಮವನ್ನು ಇಟಲಿ ಈಗ ಎದುರಿಸುತ್ತಿದೆ. ಇಟಲಿಯಲ್ಲಿ ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಕೇವಲ 24 ಗಂಟೆಯಲ್ಲಿ 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಕೊರೋನಾ ವೈರಸ್​ ಇಟಲಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ.

ಶುಕ್ರವಾರ ಒಂದೇ ದಿನ ಇಟಲಿಯಲ್ಲಿ ಕೊರೋನಾ ವೈರಸ್​ಗೆ 969 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೋನಾಗೆ ಬಲಿಯಾದವರ ಬೇರೆಲ್ಲ ದೇಶಗಳ ಅಂಕಿ-ಅಂಶಗಳನ್ನು ಇಟಲಿ ಹಿಂದಿಕ್ಕಿದೆ. ಇಲ್ಲಿವರೆಗೆ ಇಟಲಿಯಲ್ಲಿ 86,500 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗಾಗಲೇ 9,134 ಜನರು ಸಾವನ್ನಪ್ಪಿದ್ದಾರೆ.  ಇದಕ್ಕೂ ಮೊದಲು ಮಾ. 21ರಂದು ಇಟಲಿಯಲ್ಲಿ 793 ಜನರು ಸಾವನ್ನಪ್ಪಿದ್ದರು. ಆದರೆ, ನಿನ್ನೆ ಒಂದೇ ದಿನ ಸುಮಾರು 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಕೊರೋನಾ ವೈರಸ್​ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದೆ.

ಇಟಲಿಯಲ್ಲಿ ಸೋಮವಾರ- 602, ಮಂಗಳವಾರ- 743, ಬುಧವಾರ- 683, ಗುರುವಾರ- 712, ಶುಕ್ರವಾರ- 969 ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಾವಿನ ಸಂಖ್ಯೆ  ಹೆಚ್ಚಾಗುವ ಸಾಧ್ಯತೆಯಿದೆ.

ಫೆ. 19ರಂದು ಇಟಲಿಯಲ್ಲಿನ ಸ್ಯಾನ್​ ಸಿರೋ ಸ್ಟೇಡಿಯಂನಲ್ಲಿ ಸಾಕರ್ ಪಂದ್ಯ ನಡೆದಿತ್ತು. ಇದಕ್ಕೆ ನಾನಾ ದೇಶಗಳ ಕ್ರೀಡಾಪ್ರೇಮಿಗಳು, ಆಟಗಾರರು ಬಂದಿದ್ದರು. ಒಟ್ಟು 40,000ಕ್ಕೂ ಅಧಿಕ ಜನರು ಭಾಗವಹಿಸಿದ್ದರು ಈ ಪಂದ್ಯದ ಬಳಿಕ ಚೀನಾದಲ್ಲಿ ಕೊರೋನಾ ವೈರಸ್​​ ಹರಡಿರುವ ಬಗ್ಗೆ ವರದಿಯಾಗಿತ್ತು. ಇಟಲಿಯಲ್ಲಿ ಆ ಪಂದ್ಯಾವಳಿ ನಡೆದ ಪ್ರದೇಶದಲ್ಲೇ ಅತಿಹೆಚ್ಚು ಕೊರೋನಾ ಸೋಂಕಿನ ಪ್ರಮಾಣ ಕಾಣಿಸಿಕೊಂಡಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ