ಲಾಕ್ ಡೌನ್ ಬಳಿಕ ಸೆನ್ಸೆಕ್ಸ್ ಇನ್ನಷ್ಟು ನಡುಕ; ದಿಢೀರ್ ಕುಸಿತ ಕಂಡು 45 ನಿಮಿಷ ಫ್ರೀಜ್ ಆದ ಷೇರುಪೇಟೆ

ಮುಂಬೈ: ಕೊರೋನಾ ವೈರಸ್ ಇಡೀ ವಿಶ್ವದ ಆರ್ಥಿಕತೆಯನ್ನು ಬುಡಮೇಲು ಮಾಡುತ್ತಿದೆ. ವಿಶ್ವಾದ್ಯಂದ ಎಲ್ಲಾ ಷೇರುಪೇಟೆಗಳೂ ನಿತ್ಯವೂ ಕುಸಿತ ಕಾಣುತ್ತಿವೆ. ಭಾರತವೂ ಇದಕ್ಕೆ ಹೊರತಲ್ಲ. ಭಾರತದಲ್ಲಿ ಇನ್ನೂ ದೊಡ್ಡ ಮಟ್ಟಕ್ಕೆ ಷೇರು ಕುಸಿತವಾಗುತ್ತಿದೆ. ಇವತ್ತು ಸೆನ್ಸೆಕ್ಸ್ ಸೂಚ್ಯಂಕ 3,300 ಅಂಕಗಳಷ್ಟು ಕುಸಿತ ಕಂಡಿದೆ. ಎನ್ಎಸ್ ನಿಫ್ಟಿ ಸೂಚ್ಯಂಕ ಕೂಡ ಹತ್ತಿರಹತ್ತಿರ 1 ಸಾವಿರ ಅಂಕ ನಷ್ಟ ಮಾಡಿಕೊಂಡಿದೆ. ಇಷ್ಟು ದಿಢೀರ್ ಕುಸಿತ ಕಂಡ ಬಳಿಕ ಷೇರುಪೇಟೆ 45 ನಿಮಿಷ ಫ್ರೀಜ್ ಆಯಿತು. ಮುಕ್ಕಾಲು ಗಂಟೆ ಅವಧಿ ಯಾವ ವಹಿವಾಟೂ ನಡೆಯಲಿಲ್ಲ.

ಮಧ್ಯಾಹ್ನ 1 ಗಂಟೆಯ ಒಳಗೆ ಷೇರುಪೇಟೆಯ ಸೂಚ್ಯಂಕದಲ್ಲಿ ಶೇ. 10ರಷ್ಟು ಇಳಿಕೆಯಾದರೆ 45 ನಿಮಿಷ ಕಾಲ ಫ್ರೀಜ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ. ನಿನ್ನೆ ಭಾನುವಾರ ದೇಶಾದ್ಯಂತ ಜನತಾ ಕರ್ಫ್ಯೂ ಇತ್ತು. ಇನ್ನೂ ಕೆಲ ದಿನಗಳ ಕಾಲ ದೇಶ ಹಲವು ನಗರಗಳನ್ನು ಲಾಕ್ ಡೌನ್ ಮಾಡಲಾಗುತ್ತಿದೆ. ವಿಶ್ವಾದ್ಯಂತವೂ ಇದೇ ಸ್ಥಿತಿ ಇದೆ. ಇವತ್ತು ಷೇರುಪೇಟೆ ತಲ್ಲಣಗೊಳ್ಳಲು ಇದೇ ಕಾರಣವಿರಬಹುದೆಂದು ಗ್ರಹಿಸಲಾಗಿದೆ.

ಸೆನ್ಸೆಕ್ಸ್​​ನಲ್ಲಿ ಸೋಮವಾರದ ಬೆಳಗಿನ ವಹಿವಾಟೇ 2,718 ಅಂಕಗಳ ನಷ್ಟದೊಂದಿಗೆ ಆರಂಭವಾಯಿತು. ನಂತರ ಇನ್ನಷ್ಟು ಅಂಕ ಕುಸಿತು 26,924.11 ಮಟ್ಟ ತಲುಪಿತು. ಇದಾದ ಬಳಿಕ 45 ನಿಮಿಷ ಸೆನ್ಸೆಕ್ಸ್ ಫ್ರೀಜ್ ಆಯಿತು. ಆ ನಂತರ ಮತ್ತೆ ವಹಿವಾಟು ಪ್ರಾರಂಭವಾಗಿ ಸೆನ್ಸೆಕ್ಸ್ ಇನ್ನಷ್ಟು ಅಂಕ ಕಳೆದುಕೊಂಡಿತು. ಮಧ್ಯಾಹ್ನದೊಳಗೆ 3,300 ಅಂಕಗಳಷ್ಟು ಕುಸಿತ ಕಂಡಿತು. ನಿಫ್ಟಿ ಕೂಡ 842 ಅಂಕ ನಷ್ಟ ಮಾಡಿಕೊಂಡು 7,903 ಮಟ್ಟ ತಲುಪಿತು. ಒಟ್ಟಾರೆಯಾಗಿ ಷೇರುಪೇಟೆಯಲ್ಲಿ ಇವತ್ತು 10 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಹೂಡಿಕೆದಾರರು ಕಳೆ‘ದುಕೊಂಡಿದ್ದಾರೆ.

ಬ್ಯಾಂಕಿಂಗ್ ಸಂಸ್ಥೆಗಳು ಇವತ್ತು ಹೆಚ್ಚು ಹೊಡೆತ ತಿಂದಿವೆ. ಎಕ್ಸಿಸ್ ಬ್ಯಾಂಕ್ ಅತೀ ಹೆಚ್ಚು ನಷ್ಟ ಮಾಡಿಕೊಂಡಿದೆ. ಅದರ ಷೇರು ಮೌಲ್ಯ ಶೇ. 20 ಕುಸಿದಿದೆ. ಐಸಿಐಸಿಐ ಬ್ಯಾಂಕ್, ಇಂಡಸ್​ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಸಂಸ್ಥೆಗಳ ಷೇರುಗಳು ಇವತ್ತು ಕಡಿಮೆ ಬೆಲೆಗೆ ಬಿಕರಿಯಾಗಿವೆ. ಹಾಗೆಯೇ, ವಾಹನ ತಯಾರಕ ಸಂಸ್ಥೆಗಳಾದ ಹೀರೋ ಮೋಟೋಕಾರ್ಪ್ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ಷೇರುಗಳ ಮೌಲ್ಯವೂ ಕುಸಿದಿವೆ. ಈ ಮೇಲಿನ ಸಂಸ್ಥೆಗಳ ಷೇರುಗಳು ರೆಡ್ ಮಾರ್ಕ್​ನಲ್ಲಿ ವಹಿವಾಟು ನಡೆಸುತ್ತಿವೆ.

ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಇನ್ನೂ ಮುಂದುವರಿದಿದೆ. ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಈಗ ಪ್ರತೀ ಡಾಲರ್​ಗೆ 76.12 ರೂಪಾಯಿ ದರ ಇದೆ. ಕಚ್ಛಾ ತೈಲ ಬೆಲೆಯ ಕುಸಿತವೂ ಮುಂದುವರಿದಿದೆ. ಬ್ರೆಂಟ್ ಕ್ರ್ಯೂಡ್ ಆಯಿಲ್ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ತೈಲಕ್ಕೆ 26.17 ಡಾಲರ್ ದರ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ