ಲಾಕ್‌ಡೌನ್ ಅನ್ನು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ; ಪ್ರಧಾನಿ ಮೋದಿ ಅಸಮಾಧಾನ

ಹೊಸದಿಲ್ಲಿ: ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹೇರಿರುವ ಲಾಕ್ಡೌನ್ಅನ್ನು ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಾಗಿ ಪಾಲಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಟ್ವೀಟ್ ಮೂಲಕ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ದೇಶದ 80ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಕಂಡು ಬಂದಿವೆ. 400ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಕಳೆದ ಒಂದು ವಾರದಲ್ಲಿ 8 ಜನ ಕೊರೋನಾಗೆ ಮೃತಪಟ್ಟಿದ್ದಾರೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದ ಮಾರ್ಚ್‌ 31ರ ವರೆಗೆ ಲಾಕ್‌ಡೌನ್ ಘೋಷಿಸಿದೆ. ಆದರೆ, ಕೆಲವು ರಾಜ್ಯಗಳು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಈ ಕುರಿತು ಟ್ವಿಟರ್‌ನಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, “ಅನೇಕರು ಈ ಲಾಕ್‌ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ. ದಯವಿಟ್ಟು ಇದನ್ನು ಅನುಸರಿಸುವ ಮೂಲಕ ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವ ಉಳಿಸಿ. ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ. ಈ ನಿಯಮ ಮತ್ತು ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸಲು ನಾನು ರಾಜ್ಯಗಳನ್ನು ವಿನಂತಿಸುತ್ತೇನೆ” ಎಂದು ತಿಳಿಸಿದ್ದಾರೆ.ಕೊರೋನಾ ನಿಯಂತ್ರಣಕ್ಕಾಗಿ ಮಾರ್ಚ್‌ 22ರಂದು ದೇಶದಾದ್ಯಂತ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಅಲ್ಲದೆ, ಕೊರೋನಾ ಭೀತಿಯ ನಡುವೆಯೂ ಹಗಲಿರುಳು ಜನರಿಗಾಗಿ ದುಡಿಯುವ ಪೊಲೀಸರು, ಸೈನಿಕರು, ವೈದ್ಯರು ಹಾಗೂ ಪೌರ ಕಾರ್ಮಿಕರನ್ನು ಗೌರವಿಸುವ ಸಲುವಾಗಿ ಸಂಜೆ 5 ಗಂಟೆಗೆ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲು ವಿನಂತಿಸಿದ್ದರು.

ಆದರೆ, ದೇಶದ ಜನ ಹಲವೆಡೆ ಸಾಮೂಹಿಕ ಅಂತರ ಕಾಯ್ದುಕೊಳ್ಳುವ ಸೂಚನೆಯನ್ನೂ ಬದಿಗೊತ್ತಿ ಬೀದಿ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಲ್ಲದೆ, ಶಂಕ ಜಾಕಟೆ ಬಾರಿಸುವ ಮೂಲಕ ಮೋದಿ ವಿನಂತಿಯನ್ನು ನೆರವೇರಿಸುವ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದರು. ಇನ್ನೂ ರಾಜ್ಯದ ರಾಜ್ಯಪಾಲ ವಜುಭಾಯಿ ವಾಲಾ ಸಹ ಸಾಮೂಹಿಕವಾಗಿ ಜಾಗಟೆ ಬಾರಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಈಡಾಗಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ