ಮಾರಣಾಂತಿಕ ಕೊರೋನಾವನ್ನು ಎದುರಿಸುವುದು ಹೇಗೆ?; ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ: ಮಾರಕ ಕರೋನಾ ವೈರಸ್ ಏಕಾಏಕಿ ಉಂಟಾಗುವ ಪರಿಸ್ಥಿತಿ ಮತ್ತು ಅದನ್ನು ಎದುರಿಸುವ ಪ್ರಯತ್ನಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಬುಧವಾರ ತಿಳಿಸಿದೆ.

ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ನಡೆಯುತ್ತಿರುವ ಪ್ರಯತ್ನಗಳನ್ನು ಪರಿಶೀಲಿಸಲು ನರೇಂದ್ರ ಮೋದಿ ಬುಧವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೆ, ಈ ಸಭೆಯಲ್ಲಿ ಕೊರೋನಾ ವೈರಸ್ ಅನ್ನು ಎದುರಿಸಲು ದೇಶದ ಆರೋಗ್ಯ ವ್ಯವಸ್ಥೆ ಎಷ್ಟು ಸನ್ನದ್ಧವಾಗಿದೆ ಎಂಬುದನ್ನೂ ಒಳಗೊಂಡಂತೆ ಪರೀಕ್ಷಾ ಸೌಲಭ್ಯಗಳ ಲಭ್ಯತೆ ಕುರಿತು ಚರ್ಚೆ ನಡೆಸಲಾಯಿತು ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

ಕೊರೋನಾ ವೈರಸ್ ಅನ್ನು ದೇಶದಿಂದ ನಿರ್ಮೂಲನೆ ಮಾಡಲು ಅದರ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರದ ಜೊತೆಗೆ ವಿವಿಧ ಜನಪರ ಸಮುದಾಯಗಳು ಹಾಗೂ ಸಂಘ ಸಂಸ್ಥೆಗಳು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕೊರೋನಾ ಕುರಿತು ಭೀತಿಗೆ ಒಳಗಾಗದಂತೆ ಗುರುವಾರ ಸಂಜೆ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲೂ ಅವರು ನಿಶ್ಚಯಿಸಿದ್ದಾರೆ ಎನ್ನಲಾಗುತ್ತಿದೆ.ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಜಂಟಿ ಕಾರ್ಯತಂತ್ರವನ್ನು ಸಿದ್ಧಪಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಸಾರ್ಕ್ ನಾಯಕರ ವೀಡಿಯೊ ಸಮ್ಮೇಳನದಲ್ಲೂ ಭಾಗವಹಿಸಿದ್ದರು.

ದೇಶದಲ್ಲಿ ಬುಧವಾರದ ಅಂಕಿ ಅಂಶದ ಪ್ರಕಾರ ಒಟ್ಟು 151 ಜನ ಮಾರಣಾಂತಿಕ ಕೊರೋನಾ ವೈರಸ್‌ಗೆ ತುತ್ತಾಗಿದ್ದರೆ, ಕರ್ನಾಟಕದ ಕಲಬುರ್ಗಿ ಪ್ರಕರಣವೂ ಸೇರಿದಂತೆ ದೇಶದಲ್ಲಿ ಈ ವೈರಸ್‌ಗೆ ಈವರೆಗೆ ಮೂವರು ಬಲಿಯಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ