ಷೇರುಪೇಟೆ ಭಾರೀ ತಲ್ಲಣ; 2,300ಕ್ಕೂ ಹೆಚ್ಚು ಅಂಕ ನಷ್ಟಮಾಡಿಕೊಂಡ ಸೆನ್ಸೆಕ್ಸ್

ನವದೆಹಲಿ: ಭಾರತದ ಷೇರುಪೇಟೆ ಕುಸಿತ ಮುಂದುವರಿದಿದೆ. ಹಲವು ಅನುಮಾನಗಳಲ್ಲಿ ಹೂಡಿಕೆದಾರರು ಸೋಮವಾರದ ವಹಿವಾಟು ಪ್ರಾರಂಭಿಸಿದ್ದಾರೆ. ಸೋಮವಾರದ ವಹಿವಾಟಿನಲ್ಲಿ ಬಿಎಸ್ ಸೆನ್ಸೆಕ್ಸ್ 2,300ಕ್ಕೂ ಹೆಚ್ಚು ಅಂಕಗಳಷ್ಟು (ಶೇ. 5ರಷ್ಟು) ಕುಸಿತ ಕಂಡಿತು. ನಿಫ್ಟಿ ಕೂಡ 450ಕ್ಕೂ ಹೆಚ್ಚು ಪಾಯಿಂಟ್ ಕಳೆದುಕೊಂಡಿತು. ಸನ್ ಫಾರ್ಮದ ಷೇರು ಮೌಲ್ಯ ಮಾತ್ರ ತುಸು ವೃದ್ಧಿಯಾಗಿದೆ. ಇದು ಬಿಟ್ಟರೆ ಬಹುತೇಕ ಬೇರೆಲ್ಲಾ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗುತ್ತಿವೆ.

ಜಾಗತಿಕ ತೈಲ ಬೆಲೆಯಲ್ಲಿ ಕುಸಿತವಾಗಿರುವುದು; ಕೊರೋನಾ ವೈರಸ್ ಸೋಂಕು ಹರಡುವ ವೇಗ ಹೆಚ್ಚುತ್ತಿರುವುದು; ಯೆಸ್ ಬ್ಯಾಂಕ್ ಸಂಕಷ್ಟದಲ್ಲಿರುವುದು ಹೀಗೆ ವಿವಿಧ ಕಾರಣಗಳು ಷೇರುಪೇಟೆಯನ್ನು ಅಲುಗಾಡಿಸುತ್ತಿವೆ. ಹೂಡಿಕೆದಾರರ ವಿಶ್ವಾಸವನ್ನು ಕುಂದಿಸುತ್ತಿವೆ. ತೈಲ ಬೆಲೆ ಕುಸಿತದಿಂದಾಗಿ ಓಎನ್​ಜಿಸಿ ಕಂಪನಿಯ ಷೇರು ಶೇ. 11ರಷ್ಟು ಮೌಲ್ಯ ಕುಸಿತ ಕಂಡಿದೆ. ಆರ್​ಐಎಲ್, ಇಂಡಸ್​ಇಂಡ್​ ಬ್ಯಾಂಕ್, ಪವರ್ ಗ್ರಿಡ್, ಟಾಟಾ ಸ್ಟೀಲ್, ಎಲ್ ಅಂಡ್ ಟಿ ಮತ್ತು ಟೆಕ್ ಮಹೀಂದ್ರ ಕಂಪನಿಗಳ ಷೇರುಗಳೂ ಕೂಡ ಸಾಕಷ್ಟು ನಷ್ಟ ಮಾಡಿಕೊಂಡಿವೆ.

ಜಾಗತಿಕ ಬೆಲೆ ಸಮರದಿಂದಾಗಿ ತೈಲ ಬೆಲೆ ಪ್ರಪಾತಕ್ಕೆ ಜಿಗಿಯುತ್ತಿದೆ. ಸೋಮವಾರ ಒಂದೇ ದಿನ ಶೇ. 30ರಷ್ಟು ಬೆಲೆ ಇಳಿಕೆಯಾಗಿದೆ. ಬ್ರೆಂಟ್ ಕ್ರ್ಯೂಡ್ ಫ್ಯೂಚರ್ಸ್​ನಲ್ಲಿ ಪ್ರತೀ ಬ್ಯಾರಲ್ ಕಚ್ಛಾ ತೈಲಕ್ಕೆ 32.11 ಡಾಲರ್ (ಸುಮಾರು 2,376 ರೂಪಾಯಿ) ಬೆಲೆ ಇದೆ. ಒಂದು ಬ್ಯಾರೆಲ್ ಎಂದರೆ ಸುಮಾರು 159 ಲೀಟರ್.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರದ ಬೆಳಗಿನ ವಹಿವಾಟಿನಲ್ಲಿ 2,300 ಅಂಕ ಕಳೆದುಕೊಂಡು 35,000 ಮಟ್ಟಕ್ಕಿಂತ ಕೆಳಗೆ ಇಳಿಯಿತು. ಇದು ಕಳೆದ 7 ತಿಂಗಳಲ್ಲೇ ಕನಿಷ್ಠ ಮಟ್ಟವಾಗಿದೆ. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಎನ್​ಎಸ್​ಇ ಸೂಚ್ಯಂಕ ಶೇ. 3.8ರಷ್ಟು ಅಂದರೆ ಸುಮಾರು 417 ಅಂಕಗಳಷ್ಟು ಇಳಿಕೆಗೊಂಡು 10,572 ಮಟ್ಟ ಮುಟ್ಟಿತು.

ಜಾಗತಿಕವಾಗಿಯೂ ವಿವಿಧ ಷೇರು ಮಾರುಕಟ್ಟೆಗಳು ಕುಸಿತ ಕಾಣುವುದು ಮುಂದುವರಿದಿದೆ. ಜಾಗತಿಕ ಷೇರು ಕುಸಿತಕ್ಕೆ ಕೊರೋನಾ ಮತ್ತು ತೈಲ ಬೆಲೆ ಕುಸಿತವೇ ಪ್ರಮುಖ ಕಾರಣವಾಗಿವೆ. ಏಷ್ಯಾದ ಮುಖ್ಯ ಷೇರುಪೇಟೆಗಳು ಹಿನ್ನಡೆ ಹೊಮದಿವೆ. ಶಾಂಘೈ ಶೇ. 2.41, ಹಾಂಕಾಂಗ್ ಶೇ. 3.53, ಸೋಲ್ 3.89 ಮತ್ತು ಟೋಕಿಯೋ ಸೂಚ್ಯಂಕಗಳು ಶೇ 5.65ರಷ್ಟು ಅಂಕಗಳನ್ನು ಕಳೆದುಕೊಂಡಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ