ತುಮಕೂರಿನಲ್ಲಿ ಚಿರತೆ ದಾಳಿಗೆ ಮತ್ತೊಂದು ಮಗು ಬಲಿ; ನರಭಕ್ಷಕ ಪ್ರಾಣಿಯನ್ನು ಕೊಲ್ಲಲು ಸರ್ಕಾರ ಆದೇಶ

ತುಮಕೂರು: ತುಮಕೂರಿನ ಬೈಚೇನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡೂವರೆ ವರ್ಷದ ಹೆಣ್ಣುಮಗು ಬಲಿಯಾಗಿದೆ. ಶನಿವಾರ ರಾತ್ರಿ ಮನೆಯ ಹೊರಗೆ ಆಟವಾಡುತ್ತಿದ್ದ ಮಗುವನ್ನು ಚಿರತೆ ಹೊತ್ತೊಯ್ದ ಘಟನೆಗೆ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಊರಿನ ಮಕ್ಕಳನ್ನು ಬಲಿ ಪಡೆಯುತ್ತಿರುವ ಚಿರತೆಯನ್ನು ಕೊಲ್ಲಲು ಅರಣ್ಯ ಸಚಿವ ಆನಂದ್ ಸಿಂಗ್ ಆದೇಶ ನೀಡಿದ್ದಾರೆ.

ತುಮಕೂರಿನ ಹೆಬ್ಬೂರಿನ ಬೈಚೇನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಬೈಚೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಗಂಗಚಿಕ್ಕಣ್ಣ ಅವರ ಮೊಮ್ಮಗಳು ಎರಡೂವರೆ ವರ್ಷದ ಚಂದನಾ ಚಿರತೆಗೆ ಬಲಿಯಾದ ಬಾಲಕಿ. ನಿನ್ನೆ ರಾತ್ರಿ 8 ಗಂಟೆಗೆ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿ ಚಿರತೆಯನ್ನು ನೊಡಿ ಗಾಬರಿಯಿಂದ ಮನೆಯೊಳಗೆ ಓಡಿಬರಲು ಪ್ರಯತ್ನಿಸಿದ್ದಳು. ಆಕೆಯ ಅಪ್ಪ-ಅಮ್ಮ, ಅಜ್ಜ ನೋಡುತ್ತಿದ್ದಂತೆ ಚಿರತೆ ಆಕೆಯನ್ನೊ ಹೊತ್ತೊಯ್ದಿದ್ದು, ಆಕೆಯನ್ನು ಬಿಡಿಸಿಕೊಳ್ಳಲು ಮನೆಯವರು ಚಿರತೆಯ ಬೆನ್ನತ್ತಿದರೂ ಪ್ರಯೋಜನವಾಗಲಿಲ್ಲ. ಅದಾದ 2 ಗಂಟೆಯ ನಂತರ ಆಕೆಯ ಶವ ಕಾಡಿನ ಬಳಿ ಪತ್ತೆಯಾಗಿತ್ತು.

ಈ ದುರ್ಘಟನೆಗೆ ಬೈಚೇನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಹೆಬ್ಬೂರು ಪೊಲೀಸರಿಂದ ಸೂಕ್ತ ಬಂದೋಬಸ್ತ್​ ಇಲ್ಲ ಎಂದು ಆರೋಪ ಮಾಡಿದ್ದಾರೆ. ಘಟನೆಯಿಂದಾಗಿ ಮೃತ ಬಾಲಕಿ ಚಂದನಾ ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಎರಡೇ ತಿಂಗಳಲ್ಲಿ ಇಬ್ಬರು ಮಕ್ಕಳನ್ನು ಬಲಿ ಪಡೆದಿರುವ ಚಿರತೆಯನ್ನು ಹಿಡಿದು, ಕೊಲ್ಲುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಚಂದನಾಳ ಸಾವಿಗೆ ನಮಗೆ ಪರಿಹಾರ ಬೇಡ, ಆ ಚಿರತೆಯನ್ನು ಸಾಯಿಸಿ. ನಮ್ಮ ಮಗಳಿಗೆ ಬರುವ ಪರಿಹಾರ ಧನವನ್ನು ಆ ಚಿರತೆಯನ್ನು ಕೊಲ್ಲುವ ವ್ಯಕ್ತಿಗೆ ನೀಡಲಿ ಎಂದು ಚಂದನಾಳ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಬೈಚೇನಹಳ್ಳಿಯ ಮೃತ ಚಂದನಾ ಮನೆಗೆ ಸಚಿವರಾದ ಆನಂದ್ ಸಿಂಗ್, ಜೆ.ಸಿ. ಮಾಧುಸ್ವಾಮಿ, ಶಾಸಕ ಡಿ.ಸಿ. ಗೌರಿಶಂಕರ್ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ.

ನಾಳೆಯಿಂದಲೇ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುವುದಾಗಿ ಚಂದನಾಳ ಕುಟುಂಬಸ್ಥರಿಗೆ ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ. ಶಾಸಕ ಗೌರಿಶಂಕರ್ ಕೂಡ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಮಾರ್ಚ್​ 2ರಿಂದ ಅಧಿವೇಶನ ಆರಂಭವಾಗಲಿದೆ. ಮೊದಲ ದಿನವೇ ಈ ಪ್ರದೇಶದಲ್ಲಿ ಚಿರತೆ ದಾಳಿ ಬಗ್ಗೆ ಪ್ರಶ್ನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ