ಉ.ಪ್ರದೇಶದಲ್ಲಿ 3,000 ಟನ್ ಚಿನ್ನದ ನಿಕ್ಷೇಪ ಪತ್ತೆ; ಇದು ಭಾರತದ ಈಗಿನ ಚಿನ್ನದ ಸಂಗ್ರಹಕ್ಕಿಂತ 5 ಪಟ್ಟು ಹೆಚ್ಚು!

ಲಕ್ನೋ : ಉತ್ತರ ಪ್ರದೇಶದ ಸೋನ್ಭದ್ರ ಜಿಲ್ಲೆಯಲ್ಲಿ ಇತ್ತೀಚೆಗೆ 3,000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿತ್ತು. ಚಿನ್ನದ ನಿಕ್ಷೇಪವನ್ನು ಹರಾಜು ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ತಜ್ಞರ ಪ್ರಕಾರ, ಚಿನ್ನದ ಗಣಿಯ ಮೊತ್ತ ಭಾರತದ ಈಗಿನ ಚಿನ್ನದ ನಿಕ್ಷೇಪಗಳ ಮೌಲ್ಯಕ್ಕಿಂತ 5 ಪಟ್ಟು ಹೆಚ್ಚು

ಉತ್ತರ ಪ್ರದೇಶದ ಸೋನ್ ಪಹಾಡಿ ಮತ್ತು ಹಾರ್ಡಿ ಗ್ರಾಮ ಪ್ರದೇಶದಲ್ಲಿ ಸುಮಾರು 3,000 ಟನ್ ಚಿನ್ನದ ನಿಕ್ಷೇಪವಿದೆ ಎಂದು ಭಾರತೀಯ ಭೂ ಸರ್ವೇಕ್ಷಣೆ ಇಲಾಖೆ ಮತ್ತು ಉತ್ತರ ಪ್ರದೇಶ ಭೂ ವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯ ಇತ್ತೀಚೆಗೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನ ನಿಕ್ಷೇಪಗಳಿರುವ ಬ್ಲಾಕ್​ಗಳನ್ನು ಉತ್ತರ ಪ್ರದೇಶ ಸರ್ಕಾರ ಹರಾಜು ಹಾಕಲಿದೆ.

ಇತ್ತೀಚೆಗೆ ಅಧಿಕೃತ ಪತ್ರ ಹೊರಡಿಸಿದ್ದ ಉತ್ತರ ಪ್ರದೇಶದ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ, ಸೋನ್ ಪಹಡಿಯಲ್ಲಿ 2,943.26 ಟನ್ ಚಿನ್ನದ ನಿಕ್ಷೇಪ ಹಾಗೂ ಹಾರ್ಡಿಯಲ್ಲಿ 646.15 ಕೆಜಿ ಚಿನ್ನದ ನಿಕ್ಷೇಪವಿದೆ ಎಂದು ವರದಿ ಸಲ್ಲಿಸಿತ್ತು. ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 626 ಟನ್ ಚಿನ್ನದ ನಿಕ್ಷೇಪವಿದೆ. ಉತ್ತರ ಪ್ರದೇಶದಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪ ಭಾರತದಲ್ಲಿ ಈಗಿರುವ ಚಿನ್ನದ ಗಣಿಯ ಮೌಲ್ಯಕ್ಕಿಂತ ಐದು ಪಟ್ಟು  ಹೆಚ್ಚಾಗಿದ್ದು, ಇದರ ಮೌಲ್ಯ ಸುಮಾರು 12 ಲಕ್ಷ ಕೋಟಿ ರೂ.ಗೂ ಅಧಿಕ ಎನ್ನಲಾಗಿದೆ.

ಇ-ಟೆಂಡರಿಂಗ್ ಪ್ರಕ್ರಿಯೆ ಮೂಲಕ ಈ ಬ್ಲಾಕ್ ಗಳನ್ನು ಹರಾಜು ಮಾಡಲು ಸರ್ಕಾರ ಏಳು ಸದಸ್ಯರ ತಂಡವನ್ನು ರಚಿಸಿದೆ. ಈ ತಂಡ ಇಡೀ ಪ್ರದೇಶವನ್ನು ಸಮೀಕ್ಷೆ(ಜಿಯೋ-ಟ್ಯಾಗಿಂಗ್) ನಡೆಸಿ ಅದರ ವರದಿಯನ್ನು ಲಕ್ನೋದ ಭೂವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಲಿವೆ. ಅಂದಹಾಗೆ, ಸೋನ್​ಭದ್ರಾದಲ್ಲಿ ಚಿನ್ನದ ನಿಕ್ಷೇಪಗಳನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು ಬ್ರಿಟಿಷರು ಈ ಮೊದಲೇ ಆರಂಭಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ