ನಾಳೆ ಕರ್ನಾಟಕ ಬಂದ್- ಯಥಾಸ್ಥಿತಿಯಲ್ಲಿ ಬಸ್ ಸಂಚಾರ-ಸಚಿವ ಲಕ್ಷ್ಮಣ ಸವದಿ

ಬೆಂಗಳೂರು, ಫೆ.12-ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‍ಗೆ ಕರೆನೀಡಿದ್ದರೂ ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಇರುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ನಮ್ಮ ಇಲಾಖೆಯ ಸಿಬ್ಬಂದಿ ಭಾಗವಹಿಸುವುದಿಲ್ಲ. ಕೇವಲ ಬಂದ್‍ಗೆ ನೈತಿಕ ಬೆಂಬಲ ನೀಡಿದ್ದಾರೆ. ಎಂದಿನಂತೆ ಸಾರಿಗೆ ಸಂಚಾರ ಸಹಜ ಸ್ಥಿತಿಯಲ್ಲಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಸಂದರ್ಭಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಎಲ್ಲಾದರೂ ವಾಹನಗಳಿಗೆ ತೊಂದರೆಯಾದರೆ ಪರಿಸ್ಥಿತಿಗೆ ತಕ್ಕಂತೆ ಅಧಿಕಾರಿಗಳೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ನಮ್ಮ ಇಲಾಖೆಯಲ್ಲಿ ಚಾಲಕ, ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಮಧ್ಯವರ್ತಿಗಳು ಹಣದ ಆಮಿಷ ಒಡ್ಡುತ್ತಿದ್ದಾರೆ. ನನಗೆ ಸಚಿವರು, ಅಧಿಕಾರಿಗಳು ಗೊತ್ತು ಕೆಲಸ ಮಾಡಿಕೊಡುತ್ತೇನೆ ಎಂಬ ಆಮಿಷ ಒಡ್ಡುತ್ತಿದ್ದಾರೆ. ಅಭ್ಯರ್ಥಿಗಳು ಇಂತಹ ಆಮಿಷಗಳಿಗೆ ಬಲಿಯಾಗಬಾರದು ಎಂದು ಸಚಿವರು ಮನವಿ ಮಾಡಿದರು.

ಈಗಾಗಲೇ ನೇಮಕಾತಿಯ ಪರೀಕ್ಷೆ ಮುಗಿದಿದ್ದು, ನೇರ ಹಾಗೂ ಪಾರದರ್ಶಕವಾಗಿಯೇ ನೇಮಕಾತಿ ನಡೆಯಲಿದೆ. ಮಧ್ಯವರ್ತಿಗಳು ಅಭ್ಯರ್ಥಿಗಳನ್ನು ಹಣದ ಆಮಿಷಕ್ಕೆ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು. ಹಣ ಕೊಟ್ಟು ನೀವು ಮೋಸ ಹೋಗದಿರಿ ಎಂದು ಸಚಿವರು ಪುನರುಚ್ಚರಿಸಿದರು.

2800 ಸಿಬ್ಬಂದಿ ನೇಮಕಾತಿ ನೇರ ನೇಮಕಾತಿ ಮೂಲಕವೇ ನಡೆಯಲಿದೆ. ಇದು ಸಂಪೂರ್ಣವಾಗಿ ಅರ್ಹತೆ ಆಧಾರದ ಮೇಲೆ ನಡೆಯುತ್ತದೆ. ಇಂತಹ ವದಂತಿಗಳಿಗೆ ಯಾರೊಬ್ಬರೂ ಕಿವಿಗೊಡಬಾರದು. ಇಲಾಖೆಯಲ್ಲಿ ಇಂತಹ ಯಾವುದೇ ಬೆಳವಣಿಗೆಗೆ ಅವಕಾಶ ಇರುವುದಿಲ್ಲ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ