ಬೆಳಗಾವಿ: ಸೇತುವೆ ಮೇಲಿಂದ ಟ್ರ್ಯಾಕ್ಟರ್ ಪಲ್ಟಿ, 7 ಮಂದಿ ದುರ್ಮರಣ, ಹಲವರಿಗೆ ಗಾಯ

ಬೆಳಗಾವಿ: ಸೇತುವೆ ಮೇಲಿಂದ  ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದು ಸುಮಾರು  7 ಜನ‌ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ  ಬೆಳಗಾವಿಯಲ್ಲಿ ನಡೆದಿದೆ.

ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಒಂದು ಬೋಗೂರ ಗ್ರಾಮದ ಬಳಿಯ  ಸೇತುವೆ ಮೇಲಿಂದ ಉರುಳಿ ಬಿದ್ದ ಪರಿಣಾಮ ಬೋಗೂರ ಗ್ರಾಮದ ಸಾವಿತ್ರಿ ಬಾಬು ಹುಣಸಿಕಟ್ಟಿ, ತಂಗೆವ್ವ ಯಲ್ಲಪ್ಪ ಹುಣಸೀಕಟ್ಟಿ, ಅಶೋಕ ಫಕೀರ ಕೇದಾರಿ, ಶಾಂತಮ್ಮ ಯಲ್ಲಪ್ಪ ಜುಂಜರಿ, ಶಾಂತವ್ವ ಹನುಮಂತ ಅಳಗುಂಡಿ, ನಾಗವ್ವ ಯಶವಂತ ಮಾಠೋಳ್ಳಿ ಎಂಬುವರು ಸಾವನ್ನಪ್ಪಿದ್ದಾರೆ.

 

ಖಾನಾಪುರ ತಾಲೂಕಿನ ಬೋಗೂರ ಗ್ರಾಮದಿಂದ ಕಾರ್ಮಿಕರು ಕೂಲಿ ಕೆಲಸಕ್ಕೆ ಇಟಗಿಗೆ ಹೊರಟಿದ್ದರು. ವೇಗವಾಗಿ ಹೊರಟಿದ್ದ ಟ್ರ್ಯಾಕ್ಟರ್ ಸುಮಾರು 30 ಅಡಿ ಎತ್ತರದ ಸೇತುವೆ ಮೇಲಿಂದ ಪಲ್ಟಿಯಾಗಿದೆ.‌ ಟ್ರ್ಯಾಕ್ಟರ್ ನ ಟ್ರಾಲಿ ಕಾರ್ಮಿಕರ ಮೈಮೇಲೆ ಬಿದ್ದಿದೆ.‌ ಸ್ಥಳದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಆಸ್ಪತ್ರೆಗೆ ಸಾಗಿಸುವಾಗ ಮೂವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ