ಬಿಕ್ಕಟ್ಟು ಶಮನಕ್ಕೆ ರಾಷ್ಟ್ರೀಯ ನಾಯಕ ಮೊರೆ ಹೋದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು,ಫೆ.7-ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಮುನಿಸಿಕೊಂಡಿರುವ ಮೂಲ ಬಿಜೆಪಿ ಶಾಸಕರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ಮೊರೆ ಹೋಗಿದ್ದಾರೆ.

ಕಳೆದ ರಾತ್ರಿ ಯಡಿಯೂರಪ್ಪನವರ ಪುತ್ರ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ದಿಢೀರನೆ ನವದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿತರ ನಾಯಕರನ್ನು ಭೇಟಿಯಾದ ವಿಜಯೇಂದ್ರ, ಸಚಿವ ಸಂಪುಟ ವಿಸ್ತರಣೆಯಾದ ನಂತರ ಉಂಟಾಗಿರುವ ಬಿಕ್ಕಟ್ಟು ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ವರಿಷ್ಠರಿಂದ ಕೆಲವು ಸಲಹೆಗಳನ್ನು ಪಡೆದಿದ್ದಾರೆ.

ಸಚಿವ ಸ್ಥಾನ ವಂಚಿತರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿರುವುದರಿಂದ ಸ್ವತಃ ಯಡಿಯೂರಪ್ಪನವರೇ ಬಿಕ್ಕಟ್ಟು ಶಮನಕ್ಕೆ ರಾಷ್ಟ್ರೀಯ ನಾಯಕ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ತಾವು ದೆಹಲಿಗೆ ತೆರಳಿದರೆ ಬೇರೊಂದು ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕಾಗಿ ಪುತ್ರನನ್ನು ಕಳುಹಿಸಿ ರಾಷ್ಟ್ರೀಯ ನಾಯಕರಿಂದ ಸಮಸ್ಯೆ ಇತ್ಯರ್ಥಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ.

ಜೆ.ಪಿ.ನಡ್ಡಾ ಮತ್ತು ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾದ ವೇಳೆ ವಿಜಯೇಂದ್ರ ಅವರು ಸಚಿವ ಸ್ಥಾನದಿಂದ ವಂಚಿತರಾಗಿ ಮುನಿಸಿಕೊಂಡಿರುವ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಅಂಗಾರ, ಕೆ.ಜಿ.ಬೋಪಯ್ಯ, ಆನಂದ್ ಮಾಮನಿ, ತಿಪ್ಪಾರೆಡ್ಡಿ, ಅರಗಾ ಜ್ಞಾನೇಂದ್ರ ಸೇರಿದಂತೆ ಮತ್ತಿತರರ ಜೊತೆ ಮಾತುಕತೆ ನಡೆಸುವಂತೆಯೂ ವಿಜಯೇಂದ್ರ ಮನವಿ ಮಾಡಿದ್ದಾರೆ.

ಇವರೆಲ್ಲರೂ ಪಕ್ಷಕ್ಕೆ ನಿಷ್ಠರಾಗಿದ್ದರೂ ಉಮೇಶ್ ಕತ್ತಿ ನಡೆ ಮಾತ್ರ ನಿಗೂಢವಾಗಿರುವುದರಿಂದ ತಕ್ಷಣವೇ ಅವರ ಜೊತೆ ಮಾತುಕತೆ ನಡೆಸಬೇಕು. ಸಾಧ್ಯವಾದರೆ ಸಂಪುಟಕ್ಕೆ ತೆಗೆದುಕೊಳ್ಳಲು ಅನುಮತಿ ನೀಡುವಂತೆ ಕೋರಿಕೊಂಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಕತ್ತಿಗೆ ಮಾತ್ರ ಮಣೆ ಹಾಕಿದರೆ ಇನ್ನೊಂದು ರೀತಿಯ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಕೆಲವು ದಿನಗಳು ಕಳೆದು ಹೋದರೆ ಎಲ್ಲವೂ ತನ್ನಿಂದ ತಾನೇ ಇತ್ಯರ್ಥವಾಗಲಿದೆ.

ಶಾಸಕರು ಸಚಿವ ಸ್ಥಾನ ಕೈ ತಪ್ಪಿದಾಗ ಮುನಿಸಿಕೊಳ್ಳುವುದು, ಭಿನ್ನಮತ ಸಾರುವುದು ಸರ್ವೇಸಾಮಾನ್ಯ. ಹಾಗಂದ ಮಾತ್ರಕ್ಕೆ ಯಾರೊಬ್ಬರು ರಾಜೀನಾಮೆ ಕೊಟ್ಟು ಪಕ್ಷ ಬಿಟ್ಟು ಹೋಗುವುದಿಲ್ಲ. ಅಂಥ ಪರಿಸ್ಥಿತಿ ನಿರ್ಮಾಣವಾದರೆ ನಾವೇ ಮಧ್ಯಪ್ರವೇಶ ಮಾಡುತ್ತೇವೆ ಎಂದು ಅಭಯ ನೀಡಿದ್ದಾರೆ.

ಇನ್ನು ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ಯಾರಿಗೆ ಯಾವ ಯಾವ ಹೊಣೆಗಾರಿಕೆ ನೀಡಬೇಕು ಎಂಬುದರ ಬಗ್ಗೆಯೂ ನಡ್ಡಾ ಮತ್ತು ಸಂತೋಷ್ ಕಿವಿಮಾತು ಹೇಳಿದ್ದಾರೆ.

ಹಿರಿತನ, ರಾಜಕೀಯ ಅನುಭವ, ಶೈಕ್ಷಣಿಕ ಹಿನ್ನೆಲೆ, ಸಾರ್ವಜನಿಕರ ಜೊತೆ ಹೊಂದಿರುವ ಸಂಪರ್ಕ, ಪಕ್ಷ ನಿಷ್ಠೆ ಎಲ್ಲವನ್ನು ಆಧರಿಸಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವಂತೆಯೂ ಸೂಚನೆ ಕೊಟ್ಟಿದ್ದಾರೆ.

ಸಂಪುಟಕ್ಕೆ ಬಂದಿರುವವರಲ್ಲಿ ರಮೇಶ್ ಜಾರಕಿಹೊಳಿ ಮತ್ತು ಆನಂದ್ ಸಿಂಗ್ ಹೊರತುಪಡಿಸಿದರೆ ಉಳಿದವರು ನೂತನ ಸಚಿವರು. ಈ ಇಬ್ಬರಿಗೂ ಪ್ರಬಲ ಖಾತೆ ನೀಡಿ ಉಳಿದವರಿಗೆ ಅಳೆದುತೂಗಿ ಖಾತೆ ಹಂಚಿಕೆ ಮಾಡಬೇಕೆಂದು ನಿರ್ದೇಶನ ನೀಡಿದ್ದಾರೆ.

ಹೀಗೆ ವರಿಷ್ಠರಿಂದ ಸೂಕ್ತವಾದ ಸ್ಪಂದನೆ, ಅಗತ್ಯ ಮಾರ್ಗದರ್ಶನ, ಸಲಹೆಸೂಚನೆ ಬಂದ ಹಿನ್ನೆಲೆಯಲ್ಲಿ ವಿಜಯೇಂದ್ರ ಮುಂಜಾನೆ ನಗುಮುಖದಿಂದಲೇ ದೆಹಲಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ