ಮಂತ್ರಿಮಾಲ್ ಹಾಗೂ ಮಂತ್ರಿಗ್ರೀನ್ ಅಪಾರ್ಟ್‍ಮೆಂಟ್ ಕಟ್ಟಡಗಳ ತೆರವಿಗೆ ಆದೇಶ

ಬೆಂಗಳೂರು, ಫೆ.7- ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಮಂತ್ರಿಮಾಲ್ ಹಾಗೂ ಮಂತ್ರಿಗ್ರೀನ್ ಅಪಾರ್ಟ್‍ಮೆಂಟ್ ಕಟ್ಟಡಗಳನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳುವಂತೆ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

ಕೈಗಾರಿಕಾ ವಲಯಕ್ಕೆ ಮೀಸಲಿಟ್ಟಿದ್ದ ಈ ಸ್ಥಳವನ್ನು ವಸತಿ ಪ್ರದೇಶಕ್ಕೆ ಪರಿವರ್ತನೆ ಮಾಡಿ ಅಲ್ಲಿ ಬೃಹತ್ ವಸತಿ ಸಮುಚ್ಛಯ ನಿರ್ಮಿಸಲಾಗಿತ್ತು. 400 ಕೋಟಿ ರೂ. ಮೌಲ್ಯದ 4.29 ಎಕರೆ ಪ್ರದೇಶದ ಈ ಭೂಮಿಯನ್ನು ಮರು ವಶಪಡಿಸಿಕೊಳ್ಳುವಂತೆ ನ್ಯಾಯಾಲಯ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದೆ.

ಹನುಮಂತಪುರ ಗ್ರಾಮದ ಸರ್ವೆ ನಂ.56ರಲ್ಲಿ 37 ಗುಂಟೆ ಕೆರೆ ಪ್ರದೇಶ ಹಾಗೂ 3.31 ಎಕರೆಯಲ್ಲಿ ನಿರ್ಮಿಸಿರುವ ಕಾನೂನು ಬಾಹಿರ ಕಟ್ಟಡಗಳನ್ನು ತೆರವುಗೊಳಿಸಿ ಕೂಡಲೇ ಈ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರ ನ್ಯಾಯಾಲಯದ ಬೆಂಗಳೂರು ವಿಭಾಗದ ನ್ಯಾಯಾಧೀಶರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.

ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ರಾಜಾ ಮಿಲ್ ಇದ್ದ ಸ್ಥಳದಲ್ಲಿ ಮಂತ್ರಿಮಾಲ್ ನಿರ್ಮಿಸಿರುವುದು, ಯಶವಂತಪುರ ರಸ್ತೆಯ ಕಿರ್ಲೋಸ್ಕರ್ ಕಾರ್ಖಾನೆ ಇದ್ದ ಸ್ಥಳದಲ್ಲಿ ಒರಾಯನ್ ಮಾಲ್ ಹಾಗೂ ಸುಜಾತಾ ಚಿತ್ರಮಂದಿರದ ಎದುರಿನ ಮಿನರ್ವ ಮಿಲ್ ಪ್ರದೇಶದಲ್ಲಿ ಶೋಭಾ ಅಪಾರ್ಟ್‍ಮೆಂಟ್ ನಿರ್ಮಿಸಲಾಗುತ್ತಿದ್ದು, ಕೈಗಾರಿಕಾ ಪ್ರದೇಶಗಳನ್ನು ವಸತಿ ಪ್ರದೇಶಗಳನ್ನಾಗಿ ಅಥವಾ ವಸತಿ ಪ್ರದೇಶಗಳನ್ನು ಕೈಗಾರಿಕಾ ಪ್ರದೇಶಗಳನ್ನಾಗಿ ಭೂ ಪರಿವರ್ತನೆ ಮಾಡಬಾರದು ಎಂದು ಸರ್ವೋಚ್ಛ ನ್ಯಾಯಾಲಯದ ಆದೇಶವಿದ್ದರೂ ಕಾನೂನು ಬಾಹಿರವಾಗಿ ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಅಂದಿನ ಆಯುಕ್ತರಿಗೆ ದೂರು ನೀಡಿದ್ದರು.

ಮಾತ್ರವಲ್ಲ ಈ ಅಕ್ರಮ ಕುರಿತಂತೆ ಎಸಿಬಿ, ಬಿಎಂಟಿಎಫ್ ಹಾಗೂ ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದ್ದರು ಹಾಗೂ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಕೈಗಾರಿಕೆಗಳಿಗೆ ಮೀಸಲಿಟ್ಟ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಬಿಬಿಎಂಪಿ ಆಯುಕ್ತ ಕುಮಾರ್‍ನಾಯಕ್ ಅವರು ಕಾನೂನು ಹೋರಾಟದ ಮೂಲಕ ಸ್ವತ್ತುಗಳನ್ನು ವಾಪಸ್ ಪಡೆಯುವುದಾಗಿ ಭರವಸೆ ನೀಡಿದ್ದರು.

ರಮೇಶ್ ಅವರು ನೀಡಿದ ದೂರಿನ ಆಧಾರದ ಮೇಲೆ ಜಕ್ಕರಾಯನಕೆರೆಗೆ ಹೊಂದಿಕೊಂಡಂತಿದ್ದ ಹನುಮಂತಪುರ ಗ್ರಾಮದ ಸರ್ವೆ ನಂ.56ರಲ್ಲಿರುವ 3.31 ಎಕರೆ ವಿಸ್ತೀರ್ಣದ ಸ್ವತ್ತು ಹಾಗೂ 37 ಗುಂಟೆ ಕೆರೆ ಒತ್ತುವರಿ ಸೇರಿದಂತೆ 4.29 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಹಮಾರಾ ಶೆಲ್ಟರ್ಸ್ ಸಂಸ್ಥೆಯವರು ಮಂತ್ರಿಮಾಲ್ ಮತ್ತು ಮಂತ್ರಿಗ್ರೀನ್ ವಸತಿ ಸಮುಚ್ಛಯವನ್ನು ನಿರ್ಮಿಸಿಕೊಂಡಿದ್ದರು.

ಈ ಒತ್ತುವರಿ ಕುರಿತಂತೆ ಜಂಟಿ ಸರ್ವೆಗೆ ಆದೇಶಿಸಲಾಗಿತ್ತು. ಪ್ರಕರಣ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರ ನ್ಯಾಯಾಲಯದ ನ್ಯಾಯಾಧೀಶರು ಮೇಲ್ಕಂಡ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳುವಂತೆ ಮಹತ್ವದ ತೀರ್ಪು ನೀಡಿದ್ದಾರೆ.

ಕಿರ್ಲೋಸ್ಕರ್ ಹಾಗೂ ಮಿನರ್ವ ಮಿಲ್ ಒತ್ತುವರಿ ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೋಟ್ಯಂತರ ರೂ. ಬೆಲೆಬಾಳುವ ಆ ಸ್ಥಳಗಳು ಶೀಘ್ರದಲ್ಲೇ ಪಾಲಿಕೆ ವಶಕ್ಕೆ ಬರಲಿದೆ ಎಂದು ಎನ್.ಆರ್.ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ