ಬಹುದೊಡ್ಡ ಸವಾಲಾಗಿ ಪರಿಣಮಿಸಿದ ಖಾತೆ ಹಂಚಿಕೆ

ಬೆಂಗಳೂರು,ಫೆ.7- ಅಳೆದು ತೂಗಿ 2ನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಖಾತೆ ಹಂಚಿಕೆಯೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಕೆಲವರು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿರುವುದರಿಂದ ಹಿರಿತನ, ಅನುಭವ ಆಧಾರವಾಗಿಟ್ಟುಕೊಂಡು ಸಚಿವರಿಗೆ ಖಾತೆ ಹಂಚುವ ಹೊಣೆಗಾರಿಕೆ ಸಿಎಂ ಮೇಲಿದೆ.
ಈಗಾಗಲೇ ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನು ನಿಗದಿಪಡಿಸಲಾಗಿದ್ದು, ಶನಿವಾರದೊಳಗೆ ಖಾತೆಗಳನ್ನು ಹಂಚುವುದಾಗಿ ಖುದ್ದು ಬಿಎಸ್‍ವೈ ಅವರೇ ಹೇಳಿದ್ದಾರೆ. ಆದರೆ ಕೆಲವರು ನಿರ್ಧಿಷ್ಟ ಖಾತೆಗಳನ್ನೇ ಕೇಳುತ್ತಿರುವುದರಿಂದ ಇದು ಮತ್ತೊಂದು ರೀತಿಯ ಬಿಕ್ಕಟ್ಟು ಸೃಷ್ಟಿಸುತ್ತಿದೆ.
ಸದ್ಯ ಜಲಸಂಪನ್ಮೂಲ, ಲೋಕೋಪಯೋಗಿ, ಇಂಧನ, ಬೆಂಗಳೂರು ನಗರಾಭಿವೃದ್ಧಿ ಖಾತೆಗಳಿಗೆ ತೀವ್ರ ಪೈಪೋಟಿ ಇದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದರೆ, ನೂತನ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಕೂಡ ಇದೇ ಖಾತೆ ತಮಗೆ ಬೇಕೆಂದು ಒತ್ತಡ ಹಾಕಿದ್ದಾರೆ. ಬಸವರಾಜ ಬೊಮ್ಮಾಯಿ ಬಳಿ ಇರುವ ಗೃಹ ಖಾತೆ ಮೇಲೆ ಬಿ.ಸಿ.ಪಾಟೀಲ್ ಆಸಕ್ತಿ ತೋರಿದ್ದು, ಈಗಾಗಲೇ ಮುಖ್ಯಮಂತ್ರಿಗಳ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರೆ.

ಇನ್ನು ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆಯಲು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ್ ಅವರು ಮಂತ್ರಿಯಾದಾಗಿನಿಂದಲೂ ಸತತ ಪ್ರಯತ್ನ ಮಾಡುತ್ತಿದ್ದಾರೆ. ನೂತನ ಸಚಿವ ಭೆರತಿ ಬಸವರಾಜು ಮತ್ತು ಎಸ್.ಟಿ.ಸೋಮಶೇಖರ್ ಕೂಡ ಇದೇ ಖಾತೆ ಮೇಲೆ ಕಣ್ಣಿಟ್ಟು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ.

ಅರ್ಹ 10 ಶಾಸಕರ ಜತೆಗೆ ಮೂಲ ಬಿಜೆಪಿಯಿಂದ ಮೂವರು ಶಾಸಕರೂ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರೆ ಖಾತೆ ಹಂಚಿಕೆ ಸ್ವಲ್ಪ ಮಟ್ಟಿಗೆ ಸುಲಭವಾಗುತ್ತಿತ್ತು. ಅಂದರೆ, ಮೂಲ ಬಿಜೆಪಿಯಿಂದ ಬಂದವರಿಗೂ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲು ಸಾಧ್ಯವಾಗುತ್ತಿತ್ತು.

ಏಕೆಂದರೆ, ಸತತ ಒಂದೂವರೆ ತಿಂಗಳಿಗೂ ಹೆಚ್ಚು ಅವಧಿಯ ಪ್ರಯತ್ನದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು 10+3 (10 ಮಂದಿ ನೂತನವಾಗಿ ಗೆದ್ದವರು, ಮೂವರು ಹಳೇ ಬಿಜೆಪಿ) ಮಾನದಂಡದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಯೋಚಿಸಿದ್ದರಾದರೂ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಉದ್ಭವವಾದ ವಿವಾದ ಮೂವರು ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ತಪ್ಪಿಸಿದೆ. ತಮ್ಮ ಆಪ್ತರೇ ಈ ವಿಚಾರದಲ್ಲಿ ಅಪಸ್ವರ ಎತ್ತಿದರೂ ಅವರನ್ನು ಸಮಾಧಾನಪಡಿಸಲು ಯಡಿಯೂರಪ್ಪನವರಿಗೆ ಸಾಧ್ಯವಾಗಲಿಲ್ಲ. ಹೈಕಮಾಂಡ್ ನಾಯಕರು ಮಧ್ಯೆ ಪ್ರವೇಶಿಸಿದರೂ ಪ್ರಯೋಜನವಾಗಿರಲಿಲ್ಲ.

ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೆಂಬ ಕಾರಣಕ್ಕೆ ಯೋಗೇಶ್ವರ್‍ಗೆ ಸಚಿವ ಸ್ಥಾನ ನೀಡಲು ಒಪ್ಪದೆ ಬಂಡಾಯದ ಬಾವುಟ ಹಾರಿಸಿರುವವರು, ಪ್ರಮುಖ ಖಾತೆಗಳೆಲ್ಲವನ್ನೂ ಈ ಹತ್ತು ಶಾಸಕರಿಗೆ ನೀಡಲು ಒಪ್ಪುವುದು ಕಷ್ಟಸಾಧ್ಯವಾಗಿದೆ.

ಅಲ್ಲದೆ, ಈ ಬಾರಿ 10 ಮಂದಿಯೊಂದಿಗೆ ಪ್ರಮಾಣವಚನ ಸ್ವೀಕರಿಸಬೇಕಾಗಿದ್ದ ಅರವಿಂದ ಲಿಂಬಾವಳಿ ಮತ್ತು ಉಮೇಶ್ ಕತ್ತಿ ಅವರು ಹಿರಿಯರಾಗಿದ್ದು, ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದರು. ಈಗ ಆಗದೇ ಇದ್ದರೂ ಮುಂದೆ ಸಚಿವರಾಗುವುದು ಖಚಿತ. ಹೀಗಾಗಿ ಕನಿಷ್ಠ ಎರಡು ಪ್ರಮುಖ ಖಾತೆಗಳನ್ನು ಅವರಿಗಾಗಿ ಮೀಸಲಿಡಬೇಕಾಗುತ್ತದೆ. ಆದರೆ, ಈಗ ಅಧಿಕಾರ ಸ್ವೀಕರಿಸಿರುವ 10 ಮಂದಿಯೂ ಪ್ರಮುಖ ಖಾತೆಗಳಿಗಾಗಿಯೇ ಪಟ್ಟು ಹಿಡಿದಿದ್ದಾರೆ. ಇದು ಕೂಡ ಯಡಿಯೂರಪ್ಪನವರಿಗೆ ಕಿರಿಕಿರಿಯ ಸಂಗತಿಯೇ ಆಗಿದೆ.

ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪಹನವರಿಗೆ ಖಾತೆಗಳ ಹಂಚಿಕೆ ನಿಜಕ್ಕೂ ಕಗ್ಗಂಟಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ