ಕೈಗಾರಿಕೆ ಜಮೀನು ಮಾರಲು ಅವಕಾಶ

ಬೆಂಗಳೂರು: ಕೈಗಾರಿಕೋದ್ಯಮಿಗಳು ರೈತರಿಂದ ಖರೀದಿಸಿದ ಕೃಷಿ ಭೂಮಿಯಲ್ಲಿ ಏಳು ವರ್ಷಗಳಲ್ಲಿ ಉದ್ದೇಶಿತ ಕೈಗಾರಿಕೆ ಆರಂಭಿಸಲು ಇಲ್ಲವೇ ಆರಂಭಿಸಿದರೂ ಮುನ್ನಡೆಸಲು ಸಾಧ್ಯವಾಗದಿದ್ದರೆ ಆ ಭೂಮಿಯನ್ನು ಅದೇ ಉದ್ದೇಶಕ್ಕೆ ಇನ್ನು ಮುಂದೆ ಮತ್ತೂಬ್ಬರಿಗೆ ಮಾರಾಟ ಮಾಡಬಹುದು.

ಈ ಸಂಬಂಧ ಕರ್ನಾಟಕ ಕೈಗಾರಿಕಾ ಅಧಿನಿಯಮ 2002ರ ಕಲಂ 109ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸರಕಾರ ಚಿಂತಿಸಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಏಳೆಂಟು ಮಸೂದೆಗಳ ಮಂಡನೆಗೆ ಸಿದ್ಧತೆ ನಡೆದಿದೆ. ಅದರಲ್ಲಿ ಉದ್ಯಮಿಗಳು ರೈತರಿಂದ ಖರೀದಿಸಿದ ಭೂಮಿಯನ್ನು 7 ವರ್ಷಗಳಲ್ಲಿ ಬಳಸ ಲಾಗದಿದ್ದರೆ ಮತ್ತೂಬ್ಬರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಮಸೂದೆ ಮಂಡನೆಗೆ ಚಿಂತಿಸಲಾಗಿದೆ ಎಂದು ಹೇಳಿದರು.

ಕೈಗಾರಿಕೋದ್ಯಮಿಗಳು ಕೈಗಾರಿಕಾ ಸ್ಥಾಪನೆಗೆ ಕೃಷಿ ಭೂಮಿಯನ್ನು ನೇರವಾಗಿ ಖರೀದಿಸಿದಾಗ ಭೂಪರಿವರ್ತನೆ ಸಹಿತ ಕೆಲವು ವಿನಾಯಿತಿಗಳನ್ನು ನೀಡಲಾಗುತ್ತಿದೆ.

ಜಿಲ್ಲಾಧಿಕಾರಿಗಳ ಹಂತದಲ್ಲಿ 100 ಎಕರೆ, ಇಲಾಖೆ ಕಾರ್ಯದರ್ಶಿಗಳ ಹಂತದಲ್ಲಿ 200 ಎಕರೆ ಭೂಮಿ ಖರೀದಿಗೆ ಮಿತಿ ನಿಗದಿಪಡಿಸಿದ್ದು, ಅದಕ್ಕಿಂತ ಹೆಚ್ಚು ಭೂಮಿ ಖರೀದಿಗೆ ಸರಕಾರದ ಮಟ್ಟದಲ್ಲಿ ಒಪ್ಪಿಗೆ ಪಡೆಯುವ ವ್ಯವಸ್ಥೆ ಇದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ