ಡಿಕೆಶಿಗೆ ಹೈಕಮಾಂಡ್​​ ಶಾಕ್​​​; ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಂ.ಬಿ. ಪಾಟೀಲ್ ಅಥವಾ ಈಶ್ವರ್ ಖಂಡ್ರೆಗೆ ನೀಡುವ ಸಾಧ್ಯತೆ

ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್​​​​​ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆಗಳಿವೆ. ಒಕ್ಕಲಿಗರ ಬದಲಿಗೆ ಲಿಂಗಾಯತರಿಗೆ ಮಣೆ ಹಾಕಲು ಕಾಂಗ್ರೆಸ್​​​ ಹೈಕಮಾಂಡ್​​ ನಿರ್ಧರಿಸಿದೆ ಎನ್ನಲಾಗುತ್ತಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಎಂ.ಬಿ. ಪಾಟೀಲ್ ಅಥವಾ ಈಶ್ವರ್ ಖಂಡ್ರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ.

ಹೌದು, ಬಿಜೆಪಿ ಬೆಂಬಲಕ್ಕೆ ನಿಂತಿರುವ ಲಿಂಗಾಯತರ ಸೆಳೆಯಲು ಕಾಂಗ್ರೆಸ್​​ ಹೈಕಮಾಂಡ್ ಈ ಮಾಸ್ಟರ್​​ ಪ್ಲಾನ್​​ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್​​​​ ಯಡಿಯೂರಪ್ಪಗೆ ಲಿಂಗಾಯತ ಸಮುದಾಯದಲ್ಲಿ ಪರ್ಯಾಯ ನಾಯಕರ ಬೆಳೆಸುವ ಪ್ರಯತ್ನವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಂ.ಬಿ. ಪಾಟೀಲ್ ಅಥವಾ ಈಶ್ವರ್ ಖಂಡ್ರೆಗೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂಉತ್ತರ ಕರ್ನಾಟಕ ಭಾಗದವರಿಗೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಚಿಂತನೆ ನಡೆಸಲಾಗಿದೆ. ಈ ನಿರ್ಧಾರದ ಹಿಂದೆ ಸಿದ್ಧರಾಮಯ್ಯ ಬಣದ ಕೈವಾಡವಿರಬಹುದು ಎನ್ನುತ್ತಿವೆ ಮೂಲಗಳು.

ಇತ್ತೀಚೆಗಷ್ಟೇ ಡಿ.ಕೆ ಶಿವಕುಮಾರ್​​ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದು ಮಾತು ಕೊಟ್ಟು ಕಾಂಗ್ರೆಸ್​​ ಹೈಕಮಾಂಡ್​​ ಪೇಚಿಗೆ ಸಿಲುಕಿದೆ ಎಂಬ ಮಾತುಗಳು ರಾಜಕೀಯದಲ್ಲಿ ಕೇಳಿ ಬರುತ್ತಿದ್ದವು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್​​ ಜೈಲಿನಿಂದ ಬಿಡುಗಡೆಯಾಗುವ ವೇಳೆ ಹೈಕಮಾಂಡ್​​ ಸೋನಿಯಾ ಗಾಂಧಿ ಅವರನ್ನು ಡಿ.ಕೆ ಶಿವಕುಮಾರ್​​ ಭೇಟಿಯಾಗಿದ್ದರು. ಆಗ ಡಿ.ಕೆ ಶಿವಕುಮಾರ್​​ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವುದಾಗಿ ಹೈಕಮಾಂಡ್​​ ಭರವಸೆ ನೀಡಿದ್ದರು. ಆದರೀಗ ಡಿ.ಕೆ ಶಿವಕುಮಾರ್​​ಗೆ ಕರ್ನಾಟಕ ಪ್ರಾದೇಶಿಕ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಎರಡು ದಿನಗಳ ಹಿಂದೆ ಡಿ.ಕೆ ಶಿವಕುಮಾರ್​​ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು ಎನ್ನಲಾಗುತ್ತಿದೆ.

ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ಹೆಸರು ಹೈಕಮಾಂಡ್​ ಪ್ರಸ್ತಾಪ ಮಾಡಲಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಸಿದ್ದರಾಮಯ್ಯ ಮಾಸ್ಟರ್​​ ಪ್ಲಾನ್​​ ಮಾಡಿದ್ದರು ಎನ್ನಲಾಗಿತ್ತು. ತನ್ನ ಆಪ್ತರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಸಿದ್ದರಾಮಯ್ಯ ಆಪ್ತರ ಹೆಸರುಗಳನ್ನುಮುಂಚೂಣಿಗೆ ತರುವಲ್ಲಿ ಯಶಸ್ವಿಯೂ ಆಗಿದ್ದರು.
ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಹೀನಾಯ ಸೋಲಿನ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​​ ಶಾಸಕಾಂಗ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂತೆಯೇ ದಿನೇಶ್​ ಗುಂಡೂರಾವ್​​ ಕೂಡ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಬ್ಬರ ರಾಜೀನಾಮೆ ಅಂಗೀಕಾರ ಆಗುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನಕ್ಕೆ ಹೈಕಮಾಂಡ್​​ ಬಳಿ ಕಾಂಗ್ರೆಸ್​​ ನಾಯಕರು ಲಾಬಿಗೆ ಮುಂದಾಗಿದ್ದಾರೆ.
ಮಾಜಿ ಸಚಿವ ಡಿ.ಕೆ ಶಿವಕುಮಾರ್​​, ಎಚ್​​. ಕೆ ಪಾಟೀಲ್​​, ಕೆ. ಎಚ್ ಮುನಿಯಪ್ಪ​​ ಕೆಪಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಕೆ. ಎಚ್​​ ಮುನಿಯಪ್ಪ ಬೆಂಬಲಕ್ಕೆ ಬಿ.ಕೆ ಹರಿಪ್ರಸಾದ್​​ ನಿಂತಿದ್ದು, ಎಚ್​.ಕೆ ಪಾಟೀಲ್​​ ಬೆನ್ನಿಗೆ ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​​ ಖರ್ಗೆ ನಿಂತಿದ್ಧಾರೆ. ಈಗಾಗಲೇ ರಾಹುಲ್​​ ಭೇಟಿಗೆ ಯತ್ನಿಸಿದರೂ ವಿಫಲವಾಗಿದ್ದು, ಸೋನಿಯಾ ಗಾಂಧಿ ಅವರನ್ನಾದರೂ ಭೇಟಿಯಾಗಬೇಕೆಂದು ಮುಂದಾಗಿದ್ದಾರೆ. ಇವರ ಜತೆಗೆ ಬೆಳಗಾವಿಯ ಪ್ರಭಾವಿ ಶಾಸಕ ಸತೀಶ್ ಜಾರಕಿಹೊಳಿ ಕೂಡ ಕೆಪಿಸಿಸಿ ಸ್ಥಾನ ಆಕಾಂಕ್ಷಿಯಾಗಿದ್ದಾರೆ. ಈ ಬೆನ್ನಲ್ಲೀಗ ನಾನು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೊಸ ಬಾಂಬ್ ಸಿಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ