ವಿಕೋಪಕ್ಕೆ ತಿರುಗಿದ ಉಭಯ ದೇಶಗಳ ನಡುವಿನ ಸಂಘರ್ಷ

ಟೆಹ್ರಾನ್, ಜ.6- ಇರಾನ್ ಸೇನೆಯ ಪ್ರಮುಖ ಕಮಾಂಡರ್‍ಕಾಸಿಂ ಸುಲೈಮಾನಿ ಅವರನ್ನು ಅಮೆರಿಕಾ ಹತ್ಯೆ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಪರಸ್ಪರ ಭೀಕರ ದಾಳಿಗಳ ಬೆದರಿಕೆ ವಿನಿಮಯವಾಗುತ್ತಿದೆ.

ಇರಾನ್ ಮೇಲೆ ಭೀಕರ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಯಾಗಿ ಅಮೆರಿಕಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ತುದಿಗಾಲಲ್ಲಿ ನಿಂತಿದೆ.

ಇದರಂತೆ ಪ್ರತಿ ದಾಳಿ ನಡೆಸುವ ಸಲುವಾಗಿ ಅಮೆರಿಕಾ ರಾಷ್ಟ್ರದ ವಿವಿಧ 35 ತಾಣಗಳನ್ನು ಗುರುತಿಸಿರುವ ಇರಾನ್, ಪ್ರತೀಕಾರದ ಧ್ಯೋತಕವಾಗಿ ತನ್ನ ಮಸೀದಿಯೊಂದರ ಗುಮ್ಮಟದ ಮೇಲೆ ಕೆಂಪು ಬಾವುಟ ಹಾರಿಸಿದೆ.

ಶಿಯಾ ಸಂಪ್ರದಾಯದ ಪ್ರಕಾರ ಈ ರೀತಿ ಮಸೀದಿ ಮೇಲೆ ಕೆಂಪು ಬಾವುಟ ಹಾರಿಸುವುದು ರಕ್ತಪಾತ ಸಹಿತ ಪ್ರತೀಕಾರ ತೆಗೆದುಕೊಳ್ಳುವುದಾಗಿ ಸೂಚನೆಯಾಗಿದೆ.

ತಮ್ಮ ತಂದೆಯ ರಕ್ತಕ್ಕೆ ಯಾರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದು ಸುಲೈಮಾನಿಯವರ ಪುತ್ರಿ ಇರಾನ್ ಅಧ್ಯಕ್ಷ ರೌಹಾನಿ ಅವರನ್ನು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೌಹಾನಿಯವರು, ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆಂದು ಆಕೆಗೆ ಧೈರ್ಯ ತುಂಬಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದರ ಬೆನ್ನಲ್ಲೇ ಅಮೆರಿಕಾದ 35 ಪ್ರಮುಖ ಆಸ್ತಿಗಳನ್ನು ಇರಾನ್ ಗುರುತಿಸಿದೆ. ಅಲ್ಲದೆ, ಟೆಹ್ರಾನ್‍ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಖೋಮ್ ನಗರದಲ್ಲಿರುವ ಜಮಕರನ್ ಮಸೀದಿಯಲ್ಲಿನ ಪವಿತ್ರ ಗುಮ್ಮಟದ ಮೇಲೆ ಕೆಂಪು ಬಾವುಟ ಹಾರಿಸುವ ಮೂಲಕ ಪ್ರತೀಕಾರ ಕೈಗೊಳ್ಳುವ ಕುರಿತು ಬಹಿರಂಗ ಸಂದೇಶ ರವಾನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ