ತಾರಕಕ್ಕೇರಿದ ಗಡಿ ವಿವಾದ ಮುಂದುವರೆದ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ

ಬೆಳಗಾವಿ, ಡಿ.30-ಕರ್ನಾಟಕ-ಮಹಾರಾಷ್ಟ್ರ ನಡುವೆ ಮತ್ತೆ ಗಡಿ ವಿವಾದ ತಾರಕಕ್ಕೇರಿದ್ದು, ಶಿವಸೇನೆ ಕಿತಾಪತಿಯಿಂದ ಗಡಿ ಭಾಗ ಪ್ರಕ್ಷುಬ್ಧಗೊಂಡಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಮುಂದುವರೆದಿದ್ದು, ಕೊಲ್ಹಾಪುರದಲ್ಲಿ ಶ್ರೀಮನ್ನಾರಾಯಣ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಿ ಕಟೌಟ್ ಹರಿದು ಹಾಕಿದ್ದಾರೆ.

ಚಿತ್ರಮಂದಿರಕ್ಕೆ ನುಗ್ಗಿ ಕನ್ನಡ ಚಲನಚಿತ್ರದ ಶೋಗಳನ್ನು ಸ್ಥಗಿತಗೊಳಿಸುವ ಜೊತೆಗೆ ಹೊಟೇಲ್ ಮತ್ತು ಅಂಗಡಿಗಳ ಕನ್ನಡ ನಾಮಫಲಕ ಹಾಗೂ ಧ್ವಜಗಳಿಗೆ ಮಸಿ ಬಳಿದು ವಿಕೃತಿ ಮೆರೆದಿದ್ದಾರೆ. ಕರ್ನಾಟಕದ ಬಸ್‍ಗಳಿಗೆ ಕಲ್ಲು ತೂರಾಟ ನಡೆಸಲು ಯತ್ನಿಸಿದ್ದರಿಂದ ಬೆಳಗಾವಿ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಎಂಇಎಸ್ ಪುಂಡರ ಅಟ್ಟಹಾಸಕ್ಕೆ ಗಡಿ ಭಾಗದಲ್ಲಿ ಆತಂಕ ಉಂಟಾಗಿದ್ದು, ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಿಡಿಗೇಡಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತಿಕೃತಿಯನ್ನು ಕೂಡ ದಹಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಪದೇ ಪದೇ ಎಂಇಎಸ್‍ನವರ ಈ ರೀತಿಯ ಧೋರಣೆಗೆ ರಾಜ್ಯದ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಗಿದ ಹೋದ ಗಡಿ ಅಧ್ಯಾಯವನ್ನು ಮತ್ತೆ ಕೆದಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಹಾರಾಷ್ಟ್ರದ ಎಂಇಎಸ್ ಮತ್ತು ಶಿವಸೇನೆ ಅವರಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ರಾಜ್ಯಗಳ ನಡುವಿನ ಗಡಿ ಸಮಸ್ಯೆ ಮಾತುಕತೆ ಮೂಲಕ ಬಗೆಹರಿಯಬೇಕು. ಕನ್ನಡ ಧ್ವಜ ಸುಡುವುದರಿಂದ ಬೆಂಕಿ ಹಚ್ಚುವುದರಿಂದ ಬಗೆಹರಿಯುವುದಿಲ್ಲ. ಸರ್ಕಾರಗಳು ಮಧ್ಯಪ್ರವೇಶಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದರಿಂದ ಗಡಿ ಭಾಗದ ಕನ್ನಡಿಗರು ಕೂಡ ರೊಚ್ಚಿಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೋಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ನಿನ್ನೆ ನಿಪ್ಪಾಣಿ ಮತ್ತು ಕುಗುನಹಳ್ಳಿ ಅಂತಾರಾಜ್ಯ ಚೆಕ್‍ಪೋಸ್ಟ್ ಬಳಿ ಬೆಳಗಾವಿ ಪೋಲೀಸರು ಬಿಗಿ ಪೋಲೀಸ್ ಬಂದೋಬಸ್ತ್ ಮಾಡಿದ್ದರು. ಮಹಾರಾಷ್ಟ್ರ ಸೇರುವ ಎಲ್ಲಾ ಬಸ್‍ಗಳು ನಿಪ್ಪಾಣಿವರೆಗೆ ಮಾತ್ರ ಚಲಿಸಿದ್ದರಿಂದ ಪ್ರಯಾಣಿಕರು ಯಾತನೆ ಅನುಭವಿಸಿದ್ದಾರೆ.

ಚಂದಘಡ ಎನ್‍ಸಿಪಿ ಶಾಸಕ ರಾಜೇಶ್‍ಪಾಟೀಲ್ ನಿನ್ನೆ ಸಂಜೆ ಎಂಇಎಸ್‍ನಿಂದ ಬೆಳಗಾವಿಯ ಟಿಳಕವಾಡಿ ಪ್ರದೇಶದಲ್ಲಿ ಸನ್ಮಾನ ಸ್ವೀಕರಿಸಿ ಮರಾಠಿಗರ ಪ್ರತಿನಿಧಿಯಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಮುಂದಿನ 5 ವರ್ಷಗಳಲ್ಲಿ ಗಡಿ ಸಮಸ್ಯೆ ಇತ್ಯರ್ಥವಾದರೆ ಬೆಳಗಾವಿಯಿಂದ ಸ್ಪರ್ಧಿಸಿ ಮಹಾರಾಷ್ಟ್ರ ಶಾಸಕರಾಗಿ ಆಯ್ಕೆಯಾಗುವುದಾಗಿ ರಾಜೇಶ್ ಬಾಲಿಶ ಮತ್ತು ಹಾಸ್ಯಾಸ್ಪದ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸದ್ಯ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಜನಸಾಮಾನ್ಯರ ಜೀವನಕ್ಕೆ ಹಾನಿ ಉಂಟು ಮಾಡಿದೆ. ಬೆಳಗಾವಿ ಪೋಲೀಸರು ಎಂಇಎಸ್ ನಾಯಕರ ಚಲನವಲನಗಳ ಮೇಲೆ ನಿಗಾ ವಹಿಸಿದ್ದಾರೆ.

ಬೆಳಗಾವಿಯ ಐಜಿಪಿ ರಾಘವೇಂದ್ರ ಸುಹಾಸ, ಕೊಲ್ಹಾಪುರ ಐಜಿಪಿಯವರೊಂದಿಗೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಚರ್ಚಿಸಿದರು. ಬೆಳಗಾವಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದು, ಗಡಿ ತಂಟೆ ಹೆಸರಲ್ಲಿ ಯಾರೂ ಅಶಾಂತಿ ಸೃಷ್ಟಿಸಬಾರದು ಎಂದು ಎಚ್ಚರಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ