ಹೊಸ ವರ್ಷದ ಸಂದರ್ಭ-ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಲು ಅವಕಾಶವಿಲ್ಲ- ಜಂಟಿ ಪೋಲೀಸ್ ಆಯುಕ್ತ ರವಿಕಾಂತೇಗೌಡ

ಬೆಂಗಳೂರು, ಡಿ.30- ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಹೊಟೇಲ್‍ಗಳ ಮುಂದೆಯೇ ನಿಂತು ನಿಗಾ ವಹಿಸುವ ಪೋಲೀಸರು ಡಿ.31ರ ರಾತ್ರಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಹಿಡಿದು ವಾಹನ ಹಾಗೂ ಚಾಲನಾ ಪರವಾನಗಿಯನ್ನು ಜಪ್ತಿ ಮಾಡಲಿದ್ದಾರೆ ಎಂದು ಸಂಚಾರಿ ವಿಭಾಗದ ಜಂಟಿ ಪೋಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹೊಸ ವರ್ಷದ ಸಂದರ್ಭದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಲು ಅವಕಾಶವಿಲ್ಲ. ಬೆಂಗಳೂರಿನ 134 ಕಡೆಗಳಲ್ಲಿ ಈಗಾಗಲೇ ವಿಶೇಷ ತಪಾಸಣೆ ನಡೆಯುತ್ತಿದೆ. ನಿನ್ನೆಯಿಂದಲೂ ಪೋಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಡಿ.31ರಂದು 175 ಕಡೆಗಳಲ್ಲಿ ತಪಾಸಣಾ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಸೆಕ್ಷನ್ 279ರಡಿ ಪ್ರಕರಣ ದಾಖಲಿಸಲಾಗುವುದು. 44 ಸಂಚಾರಿ ಪೋಲೀಸ್ ಠಾಣೆಗಳ ಸಿಬ್ಬಂದಿಗಳು ಪ್ರತಿ ದಿನ ಜಾಗ ಬದಲಾವಣೆ ಮಾಡಿ ತಪಾಸಣಾ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.

ಹೋಟೆಲ್, ಪಾರ್ಟಿಹಾಲ್, ಬಾರ್ ಆಂಡ್ ರೆಸ್ಟೋರೆಂಟ್‍ಗಳ ಮುಂಭಾಗ ಹೊಸ ವರ್ಷದ ದಿನ ಸಂಚಾರಿ ಪೋಲೀಸರು ಗಸ್ತು ತಿರುಗಲಿದ್ದಾರೆ. ಪಾನಮತ್ತರಾಗಿ ವಾಹನ ಚಲಾಯಿಸಲು ಮುಂದಾದರೆ ಸ್ಥಳದಲ್ಲೇ ತಪಾಸಣೆ ಮಾಡಿ ವಾಹನ ಮತ್ತು ಚಾಲನಾ ಪರವಾನಗಿಯನ್ನು ಜಪ್ತಿ ಮಾಡಲಿದ್ದಾರೆ. ಹಾಗಾಗಿ ಸಾರ್ವಜನಿಕರು ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಅವರು ಸಲಹೆ ನೀಡಿದರು.

20018ರಲ್ಲಿ 53,192 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ವರ್ಷದ ನವೆಂಬರ್ ವರೆಗೂ 37,654 ಮಂದಿ ವಿರುದ್ಧ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣದಡಿ ಕೇಸು ದಾಖಲಿಸಲಾಗಿದೆ. ಪೆÇಲೀಸರು ಜಾರಿಗೊಳಿಸಿದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈ ಪ್ರಕರಣಗಳು ಇಳಿಮುಖವಾಗಿವೆ ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ