ಕೆಪಿಸಿಸಿ ಉಸ್ತುವಾರಿ ನಾಯಕ ಕೆ.ಸಿ.ವೇಣು ಗೋಪಾಲ್- ತಮ್ಮನ್ನು ಬದಲಾವಣೆ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ

ಬೆಂಗಳೂರು, ಡಿ.30-ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆಪಿಸಿಸಿಯ ಉಸ್ತುವಾರಿ ನಾಯಕರಾಗಿರುವ ಕೆ.ಸಿ.ವೇಣು ಗೋಪಾಲ್ ಅವರು ತಮ್ಮನ್ನು ಬದಲಾವಣೆ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿರುವ ಬೆಳವಣಿಗೆ ನಡೆದಿದೆ.

ಕೆ.ಸಿ.ವೇಣುಗೋಪಾಲ್ ಅವರು ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಅದರ ನೈತಿಕ ಹೊಣೆ ಹೊತ್ತು, ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ರಾಜೀನಾಮೆ ನೀಡಿದ್ದರು. ಅದೇ ವೇಳೆ ಬಹಳಷ್ಟು ಮಂದಿ ಕಾಂಗ್ರೆಸ್ ನಾಯಕರು ವೇಣುಗೋಪಾಲ್ ಅವರ ನಾಯಕತ್ವವನ್ನು ಬದಲಾವಣೆ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲಾರಂಭಿಸಿದ್ದರು.

ಆದರೆ ಸದ್ಯಕ್ಕೆ ಎಐಸಿಸಿ ಮಹಾಧಿವೇಶನ ಮುಗಿಯುವವರೆಗೂ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಪಕ್ಷ ಮುಂದುವರೆಸಿಕೊಂಡು ಹೋಗಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದಾರೆ. ಎಐಸಿಸಿ ಮಹಾಧಿವೇಶನದಲ್ಲಿ ಸೋನಿಯಾಗಾಂಧಿಯವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆದಿದ್ದೇ ಆದರೆ ಕೆಲವು ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಅದರಲ್ಲಿ ಕರ್ನಾಟಕ ಕಾಂಗ್ರೆಸ್‍ನ ಅಧ್ಯಕ್ಷರ ಬದಲಾವಣೆ ಕೂಡ ಸೇರಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆಗಳಿದ್ದವು. ಆದರೆ ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನ, ಪಕ್ಷದ ಹಿರಿಯ ನಾಯಕರಲ್ಲಿ ಹೊಂದಾಣಿಕೆ ಕೊರತೆ ಹಾಗೂ ಇನ್ನಿತರ ಕಾರಣಗಳಿಗಾಗಿ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಮೈತ್ರಿ ಸರ್ಕಾರ ರಚನೆಯಾದರೂ ವೇಣುಗೋಪಾಲ್ ಕೆಲವು ದುಡುಕಿನ ನಿರ್ಧಾರಗಳನ್ನು ಮಾಡಿ ಪಕ್ಷಕ್ಕೆ ಹಿನ್ನಡೆಯಾಗುವಂತೆ ಮಾಡಿದರು. ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ವೇಳೆಯಲ್ಲೂ ಗಟ್ಟಿತನದ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲೂ ಹೀಗೇ ಮುಂದುವರೆದರೆ ಕಾಂಗ್ರೆಸ್‍ಗೆ ಲಾಭವಾಗುವುದಿಲ್ಲ ಎಂದು ಕೆಲವು ನಾಯಕರು ಹೈಕಮಾಂಡ್‍ಗೆ ವರದಿ ನೀಡಿದ್ದಾರೆ.

ಕಾಂಗ್ರೆಸ್ ಬಿಟ್ಟು ಹೋದ 14 ಮಂದಿ ಶಾಸಕರಲ್ಲಿ ಬಹುತೇಕರು ವೇಣುಗೋಪಾಲ್ ಅವರ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇನ್ನೂ ಅವರನ್ನು ಪಕ್ಷದ ಉಸ್ತುವಾರಿ ಸ್ಥಾನದಲ್ಲಿ ಮುಂದುವರೆಸಿದರೆ ಮತ್ತಷ್ಟು ಮಂದಿ ಅಸಮಾಧಾನಗೊಳ್ಳುತ್ತಾರೆ ಎಂಬ ಆತಂಕಗಳು ಕೇಳಿ ಬಂದಿವೆ.

ಇದನ್ನೆಲ್ಲ ಗಮನಿಸಿರುವ ವೇಣುಗೋಪಾಲ್ ಅವರು ತಮ್ಮನ್ನು ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿಯಿಂದ ಬಿಡುಗಡೆ ಮಾಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಎಐಸಿಸಿಯ ಕಚೇರಿ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸುವಾಗ ರಾಜ್ಯಗಳ ಉಸ್ತುವಾರಿಗಳ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚುವರಿ ಹೊಣೆಗಾರಿಕೆಗಳಿಂದ ಬಿಡುಗಡೆ ಮಾಡಿ 2021ರ ವೇಳೆಗೆ ಕೇರಳದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕೂ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಸೋನಿಯಾ ಗಾಂಧಿ ಅವರ ಬಳಿ ಹೇಳಿಕೊಂಡಿರುವ ವೇಣುಗೋಪಾಲ್ ಅವರು, ಕರ್ನಾಟಕ ಹಾಗೂ ಇತರ ರಾಜ್ಯಗಳ ಉಸ್ತುವಾರಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ವೇಣುಗೋಪಾಲ್ ಅವರ ಬದಲಾವಣೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ