ಮಹಾರಾಷ್ಟ್ರಕ್ಕೆ ಕರ್ನಾಟಕದ ಒಂದಿಂಚೂ ಜಾಗ ಬಿಡುವುದಿಲ್ಲ: ಸಿಎಂ ಯಡಿಯೂರಪ್ಪ

ಬೆಂಗಳೂರು : ಮತ್ತೆ ಮಹಾರಾಷ್ಟ್ರಕರ್ನಾಟಕದಲ್ಲಿ ಭುಗಿಲೆದ್ದ ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ಯಡಿಯೂರಪ್ಪ, ಮಹಾರಾಷ್ಟ್ರ ಸರ್ಕಾರದಿಂದ ರಾಜಕೀಯ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚೂ ಜಾಗವನ್ನು ನಾವು ಬಿಡುವುದಿಲ್ಲ ಎಂದಿದ್ದಾರೆ

ಬೆಳಗಾವಿಯ ಗಡಿಭಾಗದಲ್ಲಿ ಎಂಇಎಸ್  ಪುಂಡಾಟಿಕೆ ನಡೆಸುತ್ತಾ ಬಂದಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೇ ವಿಚಾರವನ್ನು ಬಳಸಿಕೊಂಡು ಮರಾಠಿಗರನ್ನು ಭಾವನಾತ್ಮಕವಾಗಿ ಹಿಡಿದಿಡಲು ಮುಂದಾಗಿದ್ದಾರೆ. ಮರಾಠಿ ಅಸ್ಮಿತೆಯನ್ನು ಇದಕ್ಕೆ ತಳುಕು ಹಾಕಿ ಕರ್ನಾಟಕದ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಅಲ್ಲದೇ, ಬೆಳಗಾವಿ ಗಡಿಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿ, ಗಡಿ ಉಸ್ತುವಾರಿಗೆ ಇಬ್ಬರು ಸಚಿವರನ್ನೂ ನೇಮಕ ಮಾಡಿದ್ದಾರೆ.

ಈ ಕುರಿತು ಮೌನ ಮುರಿದಿರುವ ಸಿಎಂ ಬಿಎಸ್​ ಯಡಿಯೂರಪ್ಪ, ಮಹಾಜನ್ ಆಯೋಗದ ವರದಿ ಪ್ರಕಾರ ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ಪ್ರದೇಶ ತೀರ್ಮಾನವಾಗಿದೆ. ಯಾವ ಪ್ರದೇಶ ಯಾವ ರಾಜ್ಯಕ್ಕೆ ಸೇರಬೇಕೆಂದು ನಿರ್ಧಾರವಾಗಿದೆ. ಈ ಬಗ್ಗೆ ಈಗ ವಿವಾದ ಸೃಷ್ಟಿಸೋದು ತರವಲ್ಲ ಎಂದು ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕದ ಒಂದಿಂಚೂ ಜಾಗ ಬಿಡುವುದಿಲ್ಲ. ಅಲ್ಲಿನ ಸಿಎಂ ಈ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಗಡಿಭಾಗದ ಕನ್ನಡಿಗರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಗಡಿಭಾಗದ ಬೆಳಗಾವಿ, ಕಾರವಾರ ಮತ್ತಿತರ ಜಿಲ್ಲೆಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿರುವ ಸುಮಾರು 800 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದು ಮಹಾರಾಷ್ಟ್ರ ರಾಜ್ಯದ ಆಗ್ರಹವಾಗಿದೆ. ಇದಕ್ಕಾಗಿ ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಸಂಘಟನೆ ಅಸ್ತಿತ್ವದಲ್ಲಿದ್ದು ಹೋರಾಟ ನಡೆಸುತ್ತಲೇ ಬಂದಿದೆ. ಈ ಗಡಿ ವಿವಾದವು ಸುಪ್ರೀಂ ಕೋರ್ಟ್​ನಲ್ಲಿ ಇನ್ನೂ ಬಗೆಹರಿಯದೇ ಉಳಿದುಕೊಂಡಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಕರ್ನಾಟಕದ ಪರವಾಗಿ ನಿಲುವು ಹೊಂದಿದೆ ಎಂಬುದು ಶಿವಸೇನೆಯ ಆಪಾದನೆಯಾಗಿದೆ. ನಿನ್ನೆ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಕೂಡ ಎಂಇಎಸ್, ಶಿವಸೇನೆಯ ವಾದಕ್ಕೆ ಧ್ವನಿಗೂಡಿಸಿದ್ದರು. ಬೆಳಗಾವಿ, ಕಾರವಾರವನ್ನು ಅವರು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಪ್ರದೇಶವೆಂದು ಬಣ್ಣಿಸಿದ್ದ ಅವರು, ಮರಾಠಿಗರ ಅಸ್ಮಿತೆಯನ್ನು ಕೆಣಕಿದರೆ ಸುಮ್ಮನಿರಲ್ಲ ಎಂದು ಕರ್ನಾಟಕದ ವಿರುದ್ಧ ಆರ್ಭಟಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ