8ನೇ ವಯಸ್ಸಿಗೆ ದೀಕ್ಷೆ ಸ್ವೀಕರಿಸಿದ ಪೇಜಾವರ ಶ್ರೀಗಳ ಬದುಕಿನ ಪಯಣ

ಶ್ರೀ ವಿಶ್ವೇಶ ತೀರ್ಥರು ಉಡುಪಿಯ ಅಷ್ಟಮಠಗಳಲ್ಲೊಂದಾದ ಪೇಜಾವರ ಅಧೋಕ್ಷ ಮಠದ 32ನೇ ಯತಿಗಳು. 1931, ಏಪ್ರಿಲ್ 27ರಂದು ಉಪ್ಪಿನಂಗಡಿಯ ರಾಮಕುಂಜದಲ್ಲಿ ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೇ ಪುತ್ರ. ಅವರ  8ನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಪಡೆಯುವ ಮುನ್ನ ಅವರ ಪೂರ್ವಾಶ್ರಮದ ಹೆಸರು ವೆಂಕಟರಾಮ ಎಂದಿತ್ತು. ಭಂಡಾರಕೇರಿ ಮಠ ಮತ್ತು ಪಲಿಮಾರು ಮಠದ ಯತಿಗಳಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರಿಂದ ವಿದ್ಯೆ ಕಲಿತರು.

13ನೇ ಶತಮಾನದಲ್ಲಿ(ಕ್ರಿ.ಶ. 1238) ದ್ವೈತ ಸಿದ್ಧಾಂತ ಪ್ರತಿಪಾದಕ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಕೃಷ್ಣ ಮಠ ಸ್ಥಾಪನೆ ಮಾಡುತ್ತಾರೆ. ಅವರ ಶಿಷ್ಯಂದಿರು ಉಡುಪಿ ಸುತ್ತಮುತ್ತ ಎಂಟು ಮಠಗಳನ್ನು ಸ್ಥಾಪಿಸುತ್ತಾರೆ. ಶ್ರೀ ಅಧೋಕ್ಷ ತೀರ್ಥರು ಪೇಜಾವರ ಮಠದ ಮೊದಲ ಯತಿಗಳಾಗಿದ್ದಾರೆ. 1938ರ ಡಿಸೆಂಬರ್ 3ರಂದು 8ನೇ ವಯಸ್ಸಿನ ವೆಂಕಟರಾಮ ಪೇಜಾವರ ಮಠದ 32ನೇ ಯತಿಯಾಗಿ ವಿಶ್ವೇಶ ತೀರ್ಥ ನಾಮಾಂಕನದೊಂದಿಗೆ ಪೀಠವೇರುತ್ತಾರೆ.

ಉಡುಪಿ ಮಠ ಪರಂಪರೆಯಲ್ಲಿ 5 ಬಾರಿ ಪರ್ಯಾಯ ಸ್ವೀಕರಿಸಿದ ಶ್ರೇಯಸ್ಸು ಅವರದ್ದು. ಕೃಷ್ಣ ಮಠದಲ್ಲಿ ಪೂಜಾ ಕೈಂಕರ್ಯ ನಡೆಸಲು ಪ್ರತೀ ಅಷ್ಟಮಠಕ್ಕೂ ಅವಕಾಶ ಇದೆ. ಅದಕ್ಕಾಗಿ ‘ಪರ್ಯಾಯ’ ವ್ಯವಸ್ಥೆ ಮಾಡಲಾಗಿದೆ. ಪ್ರತೀ 2 ವರ್ಷಕ್ಕೊಮ್ಮೆ ಸರದಿಯಂತೆ ಒಂದೊಂದು ಮಠಕ್ಕೂ ಕೃಷ್ಣನಿಗೆ ಪೂಜೆ ಸಲ್ಲಿಸುವ ಜವಾಬ್ದಾರಿ ವಹಿಸಲಾಗುತ್ತದೆ. ಅಂದರೆ, ಒಂದು ಮಠಕ್ಕೆ 14 ವರ್ಷಕ್ಕೊಮ್ಮೆ ಪರ್ಯಾಯ ಬರುತ್ತದೆ. ವಿಶ್ವೇಶ ತೀರ್ಥರಿಗೆ 1954ರಿಂದ ಪ್ರಾರಂಭಗೊಂಡು 2016ರವರೆಗೆ ಇಂಥ 5 ಪರ್ಯಾಯದ ಅವಕಾಶ ಸಿಕ್ಕಿದೆ.

ಪೇಜಾವರ ಶ್ರೀಗಳು ಧಾರ್ಮಿಕವಾಗಿಯಷ್ಟೇ ಅಲ್ಲ, ಸಾಮಾಜಿಕವಾಗಿಯೂ ಚಟುವಟಿಕೆಗಳಿಂದ ಕೂಡಿದ್ದರು. ಹಲವು ಸಮಾಜ ಸೇವಾ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಅನೇಕ ಬಡವರ್ಗದವರ ಏಳ್ಗೆಗೆ ಶ್ರಮಿಸಿದವರು. ಪೂರ್ಣ ಪ್ರಜ್ಞ ವಿದ್ಯಾಪೀಠ, ಅಖಿಲ ಭಾರತ ಮಾಧ್ವ ಮಹಾ ಮಂಡಲ ಇತ್ಯಾದಿ ಅವರು ಸ್ಥಾಪಿಸಿದ ಪ್ರಮುಖ ಸಂಘ ಸಂಸ್ಥೆಗಳಾಗಿವೆ.

ಪೇಜಾವರ ಶ್ರೀಗಳು ಎಲ್ಲಾ ವಿಚಾರದಲ್ಲೂ ಆಸಕ್ತರಾಗಿದ್ದರು. ಧರ್ಮಸೂಕ್ಷ್ಮ ವಿಚಾರ ಬಂದಾಗ ಭಿನ್ನಾಭಿಪ್ರಾಯಗಳನ್ನು ನಿರ್ಲಕ್ಷಿಸದೇ ವೈಚಾರಿಕ ಚರ್ಚೆಗೆ ಮುನ್ನುಗ್ಗುವ ಉತ್ಸಾಹ ಹೊಂದಿದ್ದರು.ಉಡುಪಿ ಕೃಷ್ಣಮಠದಲ್ಲಿ ಮತಭೇದವಿಲ್ಲದೇ ಎಲ್ಲರಿಗೂ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಅಲ್ಲಿ ವಟುಗಳ ವರ್ಗೀಕರಣ ಇದೆಯಾದರೂ ವಿಶ್ವೇಶ ತೀರ್ಥರು ಯಾರಿಗೂ ಭೇದಭಾವ ಮಾಡಿದವರಲ್ಲ ಎಂದು ಅವರ ಶಿಷ್ಯಂದಿರು ಹೇಳುತ್ತಾರೆ.

ಪದ್ಮನಾಭ ಎಂಬ ಶಿಷ್ಯ ಹೇಳುವಂತೆ, ತನಗೆ ವಿಶ್ವೇಶ ತೀರ್ಥ ಪಾದಂಗಳವರು ತಾಯಿಗಿಂತ ಹೆಚ್ಚಾಗಿ ಪ್ರೀತಿಯಿಂದ ಸಲಹಿದರೆಂಬುದನ್ನು ವಿವರಿಸಿದ್ದಾರೆ. ತಮ್ಮ ಮನೆಯಲ್ಲಿ ಇಷ್ಟು ಪ್ರೀತಿ ಸಿಗುತ್ತಿರಲಿಲ್ಲವೇನೋ, ಅಷ್ಟರ ಮಟ್ಟಕ್ಕೆ ಅವರು ನಮ್ಮನ್ನು ನೋಡಿಕೊಂಡಿದ್ದಾರೆ. ಧರ್ಮ, ವಿದ್ಯೆಯನ್ನು ಬಿಡಿಬಿಡಿಸಿ ಹೇಳಿಕೊಡುತ್ತಿದ್ದರು. ತಮ್ಮನ್ನವರು ಶಿಷ್ಯರಂತೆ ನೋಡಿದ್ಧೇ ಇಲ್ಲ. ಮಕ್ಕಳಂತೆ ಭಾವಿಸುತ್ತಿದ್ದರು. ನಾವೆಲ್ಲಾ ಊಟ ಮಾಡಿದ ಬಳಿಕವಷ್ಟೇ ಅವರು ಆಹಾರ ಸೇವಿಸುತ್ತಿದ್ದರು ಎಂದು ಪದ್ಮನಾಭ ಹೇಳುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ